ಮೈಸೂರು(Mysuru): ಮುರುಘಾ ಮಠದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟ ಬಾಲಕಿಯು ನೀಡಿದ ಗುರುತರ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಲು ಆದೇಶ ನೀಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಒಡನಾಡಿ ಸೇವಾ ಸಂಸ್ಥೆಯಿಂದ ದೂರು ನೀಡಲಾಗಿದೆ.
ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ ಈ ಕುರಿತು ಮಾಹಿತಿ ನೀಡಿದ್ದು, ಸ್ವಾಮೀಜಿಯಿಂದ ಸತತ ಲೈಂಗಿಕ ದೌರ್ಜನ್ಯಕ್ಕೊಳಪಟ್ಟ ಸಂತ್ರಸ್ತ ಬಾಲಕಿಯು ಆಪ್ತ ಸಮಾಲೋಚನೆಯ ಸಂದರ್ಭದಲ್ಲಿ ಗುರುತರವಾದ ಮಾಹಿತಿಯನ್ನು ನಮ್ಮ ಮುಂದೆ ಹಂಚಿಕೊಂಡಿದ್ದಾಳೆ. ಅಲ್ಲದೇ, ಹಣದ ಆಮಿಷ ಒಡ್ಡಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನವೂ ನಡೆಯುತ್ತಿದೆ ಎಂದು ಆಕೆ ಆರೋಪಿಸಿದ್ದಾಳೆ ಎಂದರು.
ಆ ಬಾಲಕಿಯು ತನ್ನ ಮೇಲೆ ಆಗಿದ್ದ ಲೈಂಗಿಕ ದೌರ್ಜನ್ಯವನ್ನು ಪ್ರಬಲವಾಗಿ ಪ್ರತಿಭಟಿಸುತ್ತಲೇ ಬಂದಿದ್ದಳು. ತನಗೆ ತೊಂದರೆ ನೀಡುತ್ತಿದ್ದ ಕುಡುಕ ತಂದೆ ಹಾಗೂ ಚಿಕ್ಕಪ್ಪನ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದುದಲ್ಲದೆ, ಒಂದು ಹಂತದಲ್ಲಿಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಳು.
‘ನನ್ನನ್ನು ನನ್ನ ತಂದೆ ಅಥವಾ ಚಿಕ್ಕಪ್ಪನೊಂದಿಗೆ ಕಳುಹಿಸಬೇಡಿ’ ಎಂದು ದೂರಿನಲ್ಲಿ ವಿನಂತಿಸಿಕೊಂಡಿದ್ದಳು. ಆದಾಗಿಯೂ, ಬಾಲನ್ಯಾಯ ಕಾಯಿದೆಯ ವಿರುದ್ಧ, ಬಾಲಕಿಯ ಇಚ್ಛೆ ಹಾಗೂ ಹಿತಾಸಕ್ತಿಯನ್ನು ತಿರಸ್ಕರಿಸಿ ಆರೋಪಿಯ ಪರ ನಿಂತಿದ್ದ ಚಿಕ್ಕಪ್ಪ ಹಾಗೂ ತಂದೆಯ ಜತೆ ಚಿತ್ರದುರ್ಗದ ಸಿಡಬ್ಲ್ಯೂಸಿಯವರು ಬಾಲಕಿಯನ್ನು ಕಳುಹಿಸಿಕೊಟ್ಟಿದ್ದು ಅನುಮಾನಾಸ್ಪದವಾಗಿದೆ. ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳನ್ನು ಹಣದ ಆಮಿಷ ಒಡ್ಡಿ ಮುಚ್ಚಿ ಹಾಕಲು ಆರೋಪಿಗಳು ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.
ಆದ್ದರಿಂದ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಆಯೋಗದ ಮೂಲಕ ಒಂದು ವಿಶೇಷ ತನಿಖಾ ಸಮಿತಿಯನ್ನು ರಚಿಸಿ ಚಿತ್ರದುರ್ಗ ಸಿಡಬ್ಲ್ಯೂಸಿ ಯ ಅಧ್ಯಕ್ಷರನ್ನು, ಸಿಬ್ಬಂದಿಯನ್ನು, ಶೋಷಣೆಗೊಳಪಟ್ಟ ಮಕ್ಕಳನ್ನು ಹಾಗೂ ಆ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪನನ್ನು ವಿಚಾರಣೆಗೊಳಪಡಿಸಬೇಕು, ಎಂದು ಸ್ಟ್ಯಾನ್ಲಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಸಂತ್ರಸ್ತೆಯರ ತಾಯಿಯ ಮೇಲೆ ಸುಳ್ಳು ಆರೋಪ ಹೊರಿಸಿ ವಿಚಾರಣೆ ನೆಪದಲ್ಲಿ ಚಿತ್ರದುರ್ಗ ಪೊಲೀಸರು ಕರೆದೊಯ್ದಿದ್ದಾರೆ. ಇದರಿಂದ ಬಾಲಕಿಯರು ತಾಯಿಯಿಂದ ದೂರವಾಗಿ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ. ಈ ಬಗ್ಗೆಯೂ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.