ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠ ಮತ್ತು ಎಸ್ ಜೆಎಂ ವಿದ್ಯಾಪೀಠದ ಆಡಳಿತವನ್ನು ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಡಿಸೆಂಬರ್ 5ರಂದು ಹಸ್ತಾಂತರಿಸಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಮಠವು ಡಿಸೆಂಬರ್ 7ರಂದು ಪ್ರಕಟಣೆ ಹೊರಡಿಸಿದೆ.
ಮುರುಘಾ ಮಠಕ್ಕೆ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಅವರನ್ನು 2022ರ ಡಿಸೆಂಬರ್ 13ರಂದು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಿತ್ತು. ಸರ್ಕಾರದ ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ನ ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸುವ ವೇಳೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಮುಂದೆ ಹೈಕೋರ್ಟ್ ನ ವಿಭಾಗೀಯ ಪೀಠವು 2023 ಜುಲೈ 4ರಂದು ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಮಠ ಮತ್ತು ವಿದ್ಯಾಪೀಠದ ಆಡಳಿತಾಧಿಕಾರಿಯಾಗಿ ಉಸ್ತುವಾರಿ ವಹಿಸಿಕೊಳ್ಳುವಂತೆ ಆದೇಶಿಸಿತ್ತು. ದೈನಂದಿನ ಚಟುವಟಿಕೆ ನಿಭಾಯಿಸಬೇಕು. ಯಾವುದೇ ನೀತಿ-ನಿರ್ಧಾರ ಕೈಗೊಳ್ಳಬಾರದು ಎಂದು ನಿರ್ದೇಶಿಸಿತ್ತು.
ವಿದ್ಯಾಪೀಠದ ಬೈಲಾ, ನಿಯಮ ಮತ್ತು ನಿಯಂತ್ರಣಗಳಿಗೆ ಅನುಗುಣವಾಗಿ ಅಧ್ಯಕ್ಷರಾಗಿ ನೇಮಕವಾದವರು ವಿದ್ಯಾಪೀಠದ ಆಡಳಿತಾತ್ಮಕ ಜವಾಬ್ದಾರಿ ನೋಡಿಕೊಳ್ಳುವವರೆಗೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಮಠ ಮತ್ತು ವಿದ್ಯಾಪೀಠದ ಆಡಳಿತ ಮೇಲ್ವಿಚಾರಣೆ ಮಾಡಬೇಕು ಎಂದಿತ್ತು.
ಅಲ್ಲದೇ, ವಿದ್ಯಾಪೀಠಕ್ಕೆ ಅಧ್ಯಕ್ಷರು ನೇಮಕವಾದ ಬಳಿಕ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಪಾತ್ರ ಅಂತ್ಯವಾಗಲಿದೆ ಎಂದು 2023ರ ಸೆಪ್ಟೆಂಬರ್ 27ರಂದು ಮೇಲ್ಮನವಿಗಳ ಇತ್ಯರ್ಥ ಆದೇಶದಲ್ಲಿ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಮಧ್ಯೆ, ಪೋಕ್ಸೊ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ನವೆಂಬರ್ 16ರಂದು ಕರ್ನಾಟಕ ಹೈಕೋರ್ಟ್ ನ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಚಿತ್ರದುರ್ಗ ವ್ಯಾಪ್ತಿಗೆ ತೆರಳಬಾರದು ಎಂದು ಷರತ್ತು ವಿಧಿಸಿತ್ತು.