ದಾವಣಗೆರೆ: ಜಾಮೀನಿನಲ್ಲಿ ಬಿಡುಗಡೆಯಾದ ವಾರದ ಒಳಗೆ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರನ್ನು ಸೋಮವಾರ(ನ.20) ಪೊಲೀಸರು ಮತ್ತೆ ಬಂಧಿಸಿದ್ದಾರೆ.
ದಾವಣಗೆರೆಯ ದೊಡ್ಡಪೇಟೆಯಲ್ಲಿನ ವಿರಕ್ತ ಮತದಲ್ಲಿದ್ದ ಶರಣರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ಜೀಪ್ ನಲ್ಲಿ ಚಿತ್ರದುರ್ಗದತ್ತ ಕರೆದೊಯ್ದಿದ್ದಾರೆ.
ಎರಡನೇ ಪೋಕ್ಸೋ ಪ್ರಕರಣಕ್ಕೆ ಜಿಲ್ಲಾ ನ್ಯಾಯಾಲಯ ಜಾಮೀನು ರಹಿತ ಬಂಧನಕ್ಕೆ ಆದೇಶಿಸಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೊದಲನೇ ಪೋಕ್ಸೋ ಪ್ರಕರಣದಲ್ಲಿ ನ.16 ರಂದು ಹೈಕೋರ್ಟ್ ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ನ.16 ರಂದು ಮುರುಘಾ ಶರಣರು ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಆಗಿದ್ದರು. ಬಿಡುಗಡೆಗೆ ಮೊದಲು ಎರಡನೇ ಪೋಕ್ಸೋ ಪ್ರಕರಣದ ಬಾಡಿ ವಾರೆಂಟ್ ಕುರಿತ ವಿಚಾರಣೆ ನಡೆಯುತ್ತಿತ್ತು. ಬೆಳಗ್ಗೆ ಕಾರಾಗೃಹದಿಂದ ವೀಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಶ್ರೀಗಳು, ಮಧ್ಯಾಹ್ನದ ವಿಚಾರಣೆಗೆ ಮೊಬೈಲ್ ಮೂಲಕ ವಿಸಿಗೆ ಬಂದಿದ್ದರು.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕ ಕೆ.ಆರ್. ಅನಿಲ್ ಕುಮಾರ್, ವೃತ್ತ ನಿರೀಕ್ಷಕ ಜಿ.ಕೆ. ಮುದ್ದುರಾಜ್, ಪಿಎಸ್ ಐ ಶಿವಕುಮಾರ್ ನೇತೃತ್ವದ ಪೊಲೀಸರ ತಂಡ ದಾವಣಗೆರೆಯ ವಿರಕ್ತ ಮಠಕ್ಕೆ ಆಗಮಿಸಿ ಬಂಧಿಸಿ, ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ.
ಬಂಧನಕ್ಕೆ ಒಳಪಡಿಸುವ ಸಂದರ್ಭದಲ್ಲಿ ವಿರಕ್ತ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಜೊತೆಗೆ ಟ್ರಸ್ಟಿಗಳಾದ ಎಂ. ಜಯಕುಮಾರ್, ಅಂದನೂರು ಮುಪ್ಪಣ್ಣ ಇತರರು ಇದ್ದರು.
ವಿಚಾರಣೆ ನಡುವೆಯೇ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನ.18 ರಂದು ನಡೆದ ನ್ಯಾಯಾಲಯ ಕಲಾಪದ ವೇಳೆ ಜಿಲ್ಲಾ ಕಾರಾಗೃಹದ ಬಿಡುಗಡೆ ಪ್ರಕ್ರಿಯೆ ಕುರಿತು ತನಿಖೆಗೆ ಆದೇಶಿಸಲಾಗಿತ್ತು.ಇದೇ ಪ್ರಕರಣದ ಆದೇಶವನ್ನು ಕಾಯ್ದಿರಿಸಿದ್ದ ನ್ಯಾಯಾಲಯ ಬಂಧಿಸಿ ಕರೆತರುವಂತೆ ಆದೇಶಿಸಿತ್ತು.
ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ದ 2022 ರ ಸೆಪ್ಟೆಂಬರ್ ನಲ್ಲಿ ಎರಡು ಫೋಕ್ಸೋ ಪ್ರಕರಣ ದಾಖಲಾಗಿದ್ದವು. ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ 14 ತಿಂಗಳ ಕಾಲ ಸೆರೆವಾಸದಲ್ಲಿದ್ದರು.