ಚಿತ್ರದುರ್ಗ: ಕಳೆದ 14 ತಿಂಗಳಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿದ್ದ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಇಂದು ಜೈಲಿನಿಂದ ಬಿಡುಗಡೆಗೊಂಡರು.
ಮೊದಲನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಈ ಸಂಬಂಧ ವಿಚಾರಣಾ ನ್ಯಾಯಾಲಯವಾದ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಬ್ಬರ ಶ್ಯೂರಿಟಿ ಮತ್ತಿತರೆ ಅಂಶಗಳನ್ನು ಪರಿಶೀಲಿಸಿ ಬುಧವಾರ ಮಧ್ಯಾಹ್ನ ಬಿಡುಗಡೆಗೆ ಆದೇಶ ಮಾಡಿತ್ತು.
ಆದರೆ, ಸಂಜೆ ನ್ಯಾಯಾಲಯದ ಆದೇಶ ಪ್ರತಿ ತಲುಪುವುದು ವಿಳಂಭವಾಗಿದ್ದ ಕಾರಣಕ್ಕೆ ಇಂದು ಬೆಳಗ್ಗೆ ಜಿಲ್ಲಾ ಕಾರಾಗೃಹದಲ್ಲಿ ಬಿಡುಗಡೆ ಪ್ರಕ್ರಿಯೆ ನಡೆಸಿ ಮಧ್ಯಾಹ್ನ 12.40ಕ್ಕೆ ಬಿಡುಗಡೆಯಾದರು.
ಜೈಲಿನಿಂದ ಹೊರಗೆ ಬಂದ ಮುರುಘಾ ಶರಣರನ್ನು ಭಕ್ತರು, ವಕೀಲರು ಸ್ವಾಗತಿಸಿದರು. ಇಲ್ಲಿಂದ ಶರಣರು ದಾವಣಗೆರೆ ವಿರಕ್ತಮಠದ ಕಡೆಗೆ ಪ್ರಯಾಣ ಬೆಳೆಸಿದರು.
ಒಂದನೇ ಪ್ರಕರಣರದಲ್ಲಿ ನವೆಂಬರ್ 8ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಹೀಗಾಗಿ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಇಂದು ಮುರುಘಾಶ್ರೀಗಳನ್ನು ಬಿಡುಗಡೆ ಮಾಡಲಾಗಿದೆ.
ಷರತ್ತು ವಿಧಿಸಿದ ಹೈಕೋರ್ಟ್
ಜೈಲಿನಿಂದ ಬಿಡುಗಡೆಗೊಂಡಿರುವ ಮುರುಘಾ ಶರಣರಿಗೆ ಕೋರ್ಟ್ ಕೆಲವು ಷರತ್ತು ವಿಧಿಸಿದ್ದು ಅದರಂತೆ ವಿಚಾರಣೆ ಮುಗಿಯುವವರೆಗೂ ಶ್ರೀಗಳು ಚಿತ್ರದುರ್ಗಕ್ಕೆ ಹೋಗುವಂತಿಲ್ಲ. ಇಬ್ಬರ ಶ್ಯೂರಿಟಿಯನ್ನು ಒದಗಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎರಡು ಲಕ್ಷ ರೂ. ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ಷರತ್ತು ವಿಧಿಸಿದೆ.