ಮೈಸೂರು: ಮೈಸೂರಿನ ಜನತೆಗೆ ಒಳ್ಳೆಯ ಆಡಳಿತ ಕೊಡುವುದೇ ನನ್ನ ಗುರಿ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಶರೀಫ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪಾಲಿಕೆ ಆಯುಕ್ತ ಅಸಾದ್ ಶರೀಫ್, ಚಾಮುಂಡೇಶ್ವರಿ ತಾಯಿಯ ತಪ್ಪಲಿನಲ್ಲಿ ಮೈಸೂರು ಇದೆ. ಮೈಸೂರು ನಗರ ಜನತೆಗೆ ಒಳ್ಳೆಯ ಆಡಳಿತ ಕೊಡುತ್ತೇನೆ. ಅಧಿಕಾರ ವಹಿಸಿಕೊಂಡ ಬಳಿಕ ಎರಡು ಕೌನ್ಸಿಲ್ ಸಭೆಯಲ್ಲಿ ಭಾಗಿಯಾಗಿದ್ದೇನೆ. ಅನೇಕ ಸಮಸ್ಯೆಗಳು ಕೇಳಿ ಬರುತ್ತಿವೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಸ್ವಚ್ಛ ಸರ್ವೇಕ್ಷಣೆ ಸಹ ಪ್ರಾರಂಭವಾಗಿದ್ದು. ಮೈಸೂರು ಐತಿಹಾಸಿಕ ನಗರವಾಗಿದೆ. ಮೈಸೂರು ನಗರ ಜನತೆ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿ ಹೆಚ್ಚಾಗಿ ಭಾಗಿಯಾಗಬೇಕು. ಮೈಸೂರು ನಗರವನ್ನ ಸ್ವಚ್ಛವಾಗಿಡಲು ಎಲ್ಲರ ಸಹಕಾರ ತುಂಬಾ ಮುಖ್ಯ ಎಂದರು.
ದಸರಾ ಆಚರಣೆ ಸಿದ್ಧತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಸಾದ್ ಶರೀಫ್, ಈ ಹಿಂದೆ ನಾನು ಯುವ ದಸರಾದಲ್ಲಿ ಭಾಗಿಯಾಗಿ ಯಶಸ್ವಿಯಾಗಿ ನಡೆಸಿದ್ದೇನೆ. ಯುವ ದಸರಾ ಯಶಸ್ವಿಯಾಗಿ ನಡೆಸಿರುವ ತೃಪ್ತಿ ಇದೆ. ದಸರಾ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಹಕಾರ ನೀಡುತ್ತೇವೆ ಎಂದರು.
ಮೈಸೂರು ಮಹಾನಗರ ಪಾಲಿಕೆ ಚುನಾವಣೆ ವಿಚಾರ ಕುರಿತು ಮಾತನಾಡಿದ ಅವರು, ಹುಟ್ಟು ಉಚಿತ ಸಾವು ಖಚಿತ. ಚುನಾವಣೆಗಳ ವೇಳೆ ಅಧಿಕಾರಿಗಳಿಗೆ ವರ್ಗಾವಣೆ ಸರ್ವೇ ಸಾಮಾನ್ಯ. ಚುನಾವಣೆ ಸಿದ್ಧತೆ ಬಗ್ಗೆ ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿಸಿದರು.