ಮನೆ ರಾಜಕೀಯ ನನ್ನ ಜೀವಕ್ಕೆ ಅಪಾಯವಿದೆ, ಕೊಲೆಗೂ ಸಂಚು ನಡೆಸಲಾಗುತ್ತಿದೆ: ಸಿ.ಟಿ.ರವಿ ಆರೋಪ

ನನ್ನ ಜೀವಕ್ಕೆ ಅಪಾಯವಿದೆ, ಕೊಲೆಗೂ ಸಂಚು ನಡೆಸಲಾಗುತ್ತಿದೆ: ಸಿ.ಟಿ.ರವಿ ಆರೋಪ

0

ಬೆಳಗಾವಿ: ನಾನು ಕೊಟ್ಟ ದೂರನ್ನು ಸ್ವೀಕಾರ ಮಾಡದೇ, ನನ್ನನ್ನು ಬೇರೆ ಕಡೆ ಕರೆದೊಯ್ಯಲು ಯತ್ನಿಸಲಾಗುತ್ತಿದೆ. ನನ್ನ ಜೀವಕ್ಕೆ ಅಪಾಯವಿದೆ, ಕೊಲೆಗೂ ಸಂಚು ನಡೆಸಲಾಗುತ್ತಿದೆ ಎಂದು ವಿಧಾನಪರಿಷತ್​ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ.

Join Our Whatsapp Group

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್​ನಲ್ಲಿ ಅಶ್ಲೀಲ ಪದ ಬಳಸಿದ ಆರೋಪದಡಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಗುರುವಾರ ಸಂಜೆ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಖಾನಾಪುರ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಸಿ.ಟಿ.ರವಿ ವಿಡಿಯೋ ಮೂಲಕ ಆರೋಪಗಳನ್ನು ಮಾಡಿದ್ದಾರೆ.

ಸುಮಾರು 8 ಗಂಟೆಗೆ ನಮ್ಮನ್ನು ಖಾನಾಪುರ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ನನ್ನ ಮೇಲೆ ಯಾವ ಮೊಕದ್ದಮೆ ದಾಖಲಾಗಿದೆ ಎಂಬುದನ್ನು ಹೇಳಿಲ್ಲ. ನಾನು ಕೊಟ್ಟ ದೂರಿಗೆ ಎಫ್​ಐಆರ್​ ದಾಖಲಿಸಿಲ್ಲ. ನನ್ನ ಜೀವಕ್ಕೇನಾದರೂ ಅಪಾಯವಾದರೆ ಕಾಂಗ್ರೆಸ್​ ಸರ್ಕಾರವೇ ಜವಾಬ್ದಾರಿಯಾಗಿದೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ, ಸುಳ್ಳು ದೂರು ಕೊಟ್ಟು ನನ್ನನ್ನು ಕೊಲೆ ಮಾಡುವ ಸಂಚು ಮಾಡಲಾಗಿದೆ. ಈ ಬಗ್ಗೆ ನಾನು ಸಭಾಪತಿಗಳಿಗೂ ದೂರು ನೀಡಿದ್ದೇನೆ. ಠಾಣೆಗೆ ಬಂದು ಮೂರು ಮುಕ್ಕಾಲು ಗಂಟೆಯಾದರೂ ಕೂಡ ಏನು ದೂರಿದೆ, ನಮಗೇನು ಬೇಕು ಅಂತಲೂ ಕೇಳಿಲ್ಲ. ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆಪಾದಿಸಿದರು.

ನನ್ನನ್ನು ಇಲ್ಲಿಂದ ಎಲ್ಲಿಗೆ ಕರೆದೊಯ್ಯುತ್ತಾರೆ ಎಂಬುದೂ ಕೂಡ ನನಗೆ ಸ್ಪಷ್ಟತೆ ಇಲ್ಲ. ನನ್ನ ಜೀವಕ್ಕೇನಾದರೂ ತೊಂದರೆಯಾದರೆ ಪೊಲೀಸರು, ಇಲ್ಲಿನ ಸರ್ಕಾರ, ವಿಶೇಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್​ ಹಾಗೂ ಡಿ.ಕೆ.ಶಿವಕುಮಾರ್​ ಅವರ ತಂಡವೇ ಕಾರಣವಾಗಿದೆ. ಎಲ್ಲವೂ ನಿಗೂಢವಾಗಿದೆ. ಯಾವುದೋ ಕ್ರಿಮಿನಲ್​ ರೀತಿಯಲ್ಲಿ ನನ್ನನ್ನು ನಡೆಸಿಕೊಳ್ಳಲಾಗುತ್ತಿದೆ. ಅವರ ಪ್ರತಿಯೊಂದು ನಡೆಯೂ ಅನುಮಾನಾಸ್ಪದವಾಗಿದೆ ಎಂದಿದ್ದಾರೆ.

ನಾನೊಬ್ಬ ಜನಪ್ರತಿನಿಧಿ, ಮಂತ್ರಿಯಾಗಿ ಕೆಲಸ ಮಾಡಿದವನು. ಆದರೆ ನಾನು ದೂರು ಕೊಟ್ಟರೂ ಎಫ್​ಐಆರ್​ ದಾಖಲಿಸಿಕೊಳ್ಳಲು ಮೀನಮೇಷ ಎಣಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯ ಕಾಲಘಟ್ಟದ ರೀತಿಯಲ್ಲಿ ಅವರು ನಡೆಸುಕೊಳ್ಳುತ್ತಿದ್ದಾರೆ. ಜೈ ಹಿಂದ್​ ಎಂದು ಸಿ.ಟಿ.ರವಿ ವಿಡಿಯೋದಲ್ಲಿ ಹೇಳಿದ್ದಾರೆ.