ಸಿಡ್ನಿ : ಬೋಂಡಿ ಬೀಚ್‌ನಲ್ಲಿ ಯಹೂದಿ ಹಬ್ಬದ ವೇಳೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಆರೋಪಿ ನವೀದ್‌ನ ತಾಯಿ ವೆರೀನಾ ತನ್ನ ಮಗನನ್ನು ಒಳ್ಳೆಯವನು ಎಂದು ಸಮರ್ಥಿಸಿಕೊಂಡಿದ್ದಾಳೆ.
ಅವನ ಬಳಿ ಬಂದೂಕು ಇಲ್ಲ. ಅವನು ಹಾಗೆಲ್ಲ ಹೊರಗೆ ಹೋಗುವುದಾಗಲಿ, ಸ್ನೇಹಿತರೊಂದಿಗೆ ಬೆರೆಯುವುದಾಗಲಿ ಮಾಡುವುದಿಲ್ಲ. ಅವನು ಕುಡಿಯುವುದಿಲ್ಲ, ಧೂಮಪಾನ ಮಾಡುವುದಿಲ್ಲ. ಕೆಲಸಕ್ಕೆ ಹೋಗುತ್ತಾನೆ, ಮನೆಗೆ ಬರುತ್ತಾನೆ, ವ್ಯಾಯಾಮ ಮಾಡಲು ಹೋಗುತ್ತಾನೆ ಅಷ್ಟೇ. ನನ್ನ ಮಗನಂತಹ ಮಗನನ್ನು ಪಡೆಯಲು ಎಲ್ಲರೂ ಬಯಸುತ್ತಾರೆ. ಅವನು ಒಳ್ಳೆಯ ಹುಡುಗ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ.
ನವೀದ್ ಮತ್ತು ಸಾಜಿದ್ ವಾರಾಂತ್ಯದಲ್ಲಿ ಪ್ರವಾಸಕ್ಕಾಗಿ ಜೆರ್ವಿಸ್ ಕೊಲ್ಲಿಗೆ ಹೋಗಿದ್ದರು. ನನಗೆ ಕರೆ ಮಾಡಿ, ಅಮ್ಮ, ನಾನು ಈಜಲು ಹೋಗಿದ್ದೆ. ಸ್ಕೂಬಾ ಡೈವಿಂಗ್‌ಗೆ ಹೋಗಿದ್ದೆವು ಎಂದು ಹೇಳಿದ್ದ. ನನ್ನ ಮಗ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ನಾನು ನಂಬುವುದಿಲ್ಲ ಎಂದಿದ್ದಾಳೆ.
ನವೀದ್ ಮತ್ತು ಸಾಜಿದ್ ನಡೆಸಿದ ಗುಂಡಿನ ದಾಳಿಯಲ್ಲಿ 15 ಜನ ಸಾವಿಗೀಡಾಗಿದ್ದಾರೆ. ದಾಳಿಯ ನಂತರದ ಕೆಲವು ಸಮಯದ ಬಳಿಕ ನವೀದ್ ಬಂದೂಕು ಹಿಡಿದಿರುವ ಚಿತ್ರಗಳು ವೈರಲ್ ಆಗಿದ್ದವು. ಸಾಜಿದ್‌ನನ್ನು ಪೊಲೀಸರು ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದರು.
ನವೀದ್ ಇಟ್ಟಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಮಾಡುತ್ತಿದ್ದ ಕಂಪನಿ ದಿವಾಳಿಯಾದಾಗ ಅವನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಅವನ ತಂದೆ ಸಾಜಿದ್ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ. ದಾಳಿಯ ಹಿಂದಿನ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಸ್ಟ್ರೇಲಿಯಾ ಕಠಿಣ ಬಂದೂಕು ನಿಯಂತ್ರಣ ಕಾನೂನುಗಳನ್ನು ಹೊಂದಿದೆ. ಸುಮಾರು ಮೂರು ದಶಕಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅತ್ಯಂತ ಮಾರಕ ಗುಂಡಿನ ದಾಳಿ ಎಂದು ಪರಿಗಣಿಸಲಾಗಿದೆ. 10 ನಿಮಿಷಗಳ ಕಾಲ ಈ ದಾಳಿ ನಡೆದಿದೆ. ಬೀಚ್‌ನ ಹೊರಗಿನ ಒಂದು ಸಣ್ಣ ಉದ್ಯಾನವನದಲ್ಲಿ ನಡೆದ ಹನುಕ್ಕಾ ಕಾರ್ಯಕ್ರಮದಲ್ಲಿ ಸುಮಾರು 1,000 ಜನರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.















