ಮೈಸೂರು: ಹೆಣ್ಣು ಭ್ರೂಣ ಪತ್ತೆ-ಹತ್ಯೆ ಪ್ರಕರಣ ಹಿನ್ನಲೆ ಆರೋಗ್ಯ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ.
ಹಂಪಾಪುರ ಹೋಬಳಿಯ ಜಿ . ಬಿ.ಸರಗೂರು ಮತ್ತು ಆಲನ ಹಳ್ಳಿ ಗ್ರಾಮದ ಖಾಸಗಿ ಕ್ಲಿನಿಕ್’ಗಳಾದ ಗುರು ಕ್ಲಿನಿಕ್ ಮತ್ತು ಅರುಣ್ ಕ್ಲಿನಿಕ್’ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಪಿಎಂಇಎ ಪರವಾನಗಿ ಇಲ್ಲದೆ ಇರುವುದು ಹಾಗೂ ಸ್ವಚ್ಛತೆ ಇಲ್ಲದಿರುವ ಕಾರಣ ಕ್ಲಿನಿಕ್ ಗಳಿಗೆ ಬೀಗ ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ದಾಳಿ ನಡೆಸಿದ್ದು, ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಎಲ್ಲಾ ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಯವರು ಕೆಪಿಎಂಇಎ ಪರವಾನಗಿ ಇಲ್ಲದೆ ಯಾವುದೇ ಕ್ಲಿನಿಕ್ ನಡೆಸುವಂತಿಲ್ಲ. ಆಸ್ಪತ್ರೆ ಮುಖ್ಯಸ್ಥರು ತಮಲ್ಲಿ ಸಿಗುವ ಸೌಲಭ್ಯಗಳ ವಿವರ ಮತ್ತು ಚಿಕಿತ್ಸೆಯ ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ತಿಳಿಸಿದ್ದರು.
ಮುಂದಿನ ದಿನಗಳಲ್ಲಿ ಹೆಚ್.ಡಿ. ಕೋಟೆ, ಸರಗೂರು ತಾಲ್ಲೂಕಿನ ಎಲ್ಲಾ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು, ಕೆಪಿಎಂಇಎ ಪರವಾನಗಿ ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.