ಮೈಸೂರು: ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಮೈಸೂರು ನಗರ ವ್ಯಾಪ್ತಿಯಲ್ಲಿ 458 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 184 ಕೋಟಿ ರೂ. ದಂಡ ವಸೂಲಿ ಬಾಕಿ ಇದ್ದು, ಸರ್ಕಾರ ಜೂ.21 ರಿಂದ ಜು.10ರವರೆಗೆ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿರುವ ಬಗ್ಗೆ ವ್ಯಾಪಕ ಪ್ರಚಾರದೊಂದಿಗೆ ದಂಡದ ಬಾಕಿ ಮೊತ್ತ ವಸೂಲಿಗೆ ಕ್ರಮ ವಹಿಸುವಂತೆ ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳಿಗೆ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ನಿರ್ದೇಶನ ನೀಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮತ್ತು ಸಾರಿಗೆ ಇಲಾಖೆ ಸಂಬಂಧ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿಯನ್ನು ಸರ್ಕಾರ ನೀಡಿದೆ. ಮೇ 2026ರ ಮೊದಲು ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹಾಗೂ 1991ರಿಂದ 2022ರ ಅವಧಿಯಲ್ಲಿ ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ದಂಡದಲ್ಲಿ ಶೇ.50 ರಿಯಾಯಿತಿ ನೀಡುವ ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದೆ.

ರಿಯಾಯಿತಿಯಡಿ ದಂಡ ಪಾವತಿಗೆ ಸ್ಥಾಪಿಸಿರುವ ಬೂತ್ಗಳ ಬಗ್ಗೆ ಪ್ರಚಾರ ನೀಡಬೇಕು. ಆ ಮೂಲಕ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು. ಹಾಗೆಯೇ ತಾಲೂಕು ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಿ ಕ್ರಿಯಾ ಯೋಜನೆ ರೂಪಿಸುವಂತೆ ಸೂಚನೆ ನೀಡಿದರು ಎನ್ನಲಾಗಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರಿಂದ 642 ಕೋಟಿ ರೂ. ದಂಡ ವಸೂಲಿಯಾಗಬೇಕಿದೆ. ಮೈಸೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1.4 ಕೋಟಿ ಪ್ರಕರಣಗಳಿದ್ದು, 458 ಕೋಟಿ ರೂ. ದಂಡ ಪಾವತಿಯಾಗಬೇಕಿದೆ. ಮೈಸೂರು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 36.73 ಲಕ್ಷ ಪ್ರಕರಣಗಳಿಂದ 184 ಕೋಟಿ ರೂ. ದಂಡ ವಸೂಲಿಯಾಗಬೇಕಿದೆ.

ಆದರಿಂದ ಈ ಹಿಂದೆ 77 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ 210 ಕೋಟಿ ರೂ. ಸರಕಾರಕ್ಕೆ ಆದಾಯ ಬಂದಿದೆ. ನಾಗರಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ರಾಜ್ಯದಲ್ಲಿ ಬಾಕಿ ದಂಡ ವಸೂಲಿಯಲ್ಲಿ 2ನೇ ಸ್ಥಾನದಲ್ಲಿರುವ ಮೈಸೂರು ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದು, ಮೈಸೂರಿನ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಬಾಕಿ ದಂಡ ಪಾವತಿ ವಸೂಲಿ ಕೇಂದ್ರ ಆರಂಭಿಸಿ ಎಂದು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.














