ಮನೆ ಅಪರಾಧ ಮೈಸೂರು: ಮನೆ ಮಾಲಕಿಯ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ದಂಪತಿ ಸೆರೆ

ಮೈಸೂರು: ಮನೆ ಮಾಲಕಿಯ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ದಂಪತಿ ಸೆರೆ

0

ಮೈಸೂರು: ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದು ಮನೆ ಒಡತಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ದಂಪತಿಯನ್ನು ಮೈಸೂರಿನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಹಾಸನ ನಗರದಲ್ಲಿ ವಾಸವಿರುವ ಚಿತ್ರದುರ್ಗ ಮೂಲದ ವನಿತಾ (24) ಹಾಗೂ ಚೇತನ್‌ (29) ಬಂಧಿತ ದಂಪತಿ.

ಜುಲೈ 10 ರಂದು ಮೈಸೂರಿನ ಹೆಬ್ಬಾಳದ ಒಂದನೇ ಹಂತದಲ್ಲಿ ವಾಸವಿರುವ ನಿವೃತ್ತ ಶಿಕ್ಷಕಿ ಶಾಂತಮ್ಮ ಅವರ ಖಾಲಿಯಿದ್ದ ಮಹಡಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ದಂಪತಿ ಬಂದಿದ್ದರು. ಮನೆಯ ಯಜಮಾನಿ, ದಂಪತಿಯನ್ನು ಮನೆಯೊಳಗೆ ಕರೆದು ಬಾಡಿಗೆ ಕುರಿತು ವಿವರಿಸಿದ್ದರು. ನಂತರ ದಂಪತಿ ಖಾಲಿ ಮನೆ ನೋಡಿ, ಅಡ್ವಾನ್ಸ್‌ ಹಣ ತರಲು ಎಟಿಎಂಗೆ ಹೋಗಿದ್ದರು, ಸ್ವಲ್ಪ ಸಮಯದ ನಂತರ ಬಂದು ಎಂಟಿಎಂ ವರ್ಕ್​ ಆಗುತ್ತಿಲ್ಲ ಎಂದಿದ್ದರು.

ನಂತರ ಮನೆಯ ಯಜಮಾನಿಗೆ ನಿಮ್ಮಲ್ಲಿ ಫೋನ್​ ಪೇ ಅಥವಾ ಗೂಗಲ್‌ ಪೇ ಇದೆಯಾ ಎಂದು ಕೇಳಿದ್ದರು, ಅದಕ್ಕೆ ಅವರು ಇಲ್ಲ ಎಂದು ಹೇಳಿದ್ದರು. ಬಳಿಕ ದಂಪತಿ, ಮನೆ ಹುಡುಕಿ ತುಂಬಾ ಸುಸ್ತಾಗಿದೆ ಸ್ವಲ್ಪ ಸಮಯ ಇಲ್ಲೇ ವಿ‍ಶ್ರಾಂತಿ ಪಡೆಯುತ್ತೇವೆ ಎಂದು ಹೇಳಿ ಮನೆಯಲ್ಲಿ ಉಳಿದುಕೊಂಡಿದ್ದರು. ಬಳಿಕ ಮನೆಯ ಯಜಮಾನಿ ಶಾಂತಮ್ಮ ಮಾರುಕಟ್ಟೆ ಹೋಗಿ ಅರ್ಧ ಗಂಟೆ ನಂತರ ಮನೆಗೆ ವಾಪಸ್​ ಆಗಿದ್ದರು. ಮನೆಗೆ ಬಂದ ಶಾಂತಮ್ಮನಿಗೆ ನಾವು ಟ್ರೈನ್​ಗೆ ಹೋಗುತ್ತೇವೆ, ಕುಡಿಯಲು ನೀರು ತರುವಂತೆ ಹೇಳಿದ್ದರು. ನೀರು ತರಲು ಹೋದ ಶಾಂತಮ್ಮನ ಹಿಂದೆ ಹೋದ ಚೇತನ್‌, ಅವರನ್ನು ಹಿಡಿದು ಕಟ್ಟಿ ಹಾಕಿ ಮೈ ಮೇಲೆ ಇದ್ದ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿದ್ದರು. ಬಳಿಕ ಮಾಲಕಿಯ ಕಣ್ಣಿಗೆ ಖಾರದ ಪುಡಿ ಎರಚಿ ಪ್ರಜ್ಞೆ ತಪ್ಪಿಸಿ ಪರಾರಿಯಾಗಿದ್ದರು.

ಸ್ವಲ್ಪ ಸಮಯದ ನಂತರ ಎಚ್ಚರಗೊಂಡ ಶಾಂತಮ್ಮ ಕಿರುಚಾಡಿದಾಗ ನೆರೆಹೊರೆಯವರು ಬಂದು ಕಟ್ಟಿದ್ದ ಹಗ್ಗವನ್ನು ಬಿಚ್ಚಿದ್ದರು.

ಘಟನೆ ಸಂಬಂಧ ಶಾಂತಮ್ಮನ ಸೊಸೆ ಹೆಬ್ಬಾಳ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಖತರ್ನಾಕ್‌ ದಂಪತಿಯನ್ನು ಮೂರೇ ದಿನದಲ್ಲೇ ಬಂಧಿಸಿ, ಅವರಿಂದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ. ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.