ಮೈಸೂರು(Mysuru): ಕಳೆದೊಂದು ತಿಂಗಳಿನಿಂದ ತಿ. ನರಸೀಪುರ ತಾಲೂಕಿನ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.
ಬನ್ನೂರು ಬಳಿಯ ಎಂ.ಎಲ್. ಹುಂಡಿ ಸಮೀಪ ಇರುವ ಮಲ್ಲಿಕಾರ್ಜುನ ಬೆಟ್ಟದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಬೆಳಗ್ಗೆ 9.30ರ ಸಮಯದಲ್ಲಿ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ.
ಕಳೆದ 23 ದಿನಗಳಿಂದ ಸತತವಾಗಿ ಸೆರೆ ಕಾರ್ಯಾಚರಣೆ ನಡೆಸಲಾಗಿತ್ತು. ಇಬ್ಬರು ಡಿಸಿಎಫ್, ಒಬ್ಬರು ಸಿಎಫ್ ಸೇರಿ 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಥರ್ಮಲ್ ಡ್ರೋಣ್ ಕ್ಯಾಮೆರಾವನ್ನೂ ಈ ಕಾರ್ಯಾಚರಣೆಯಲ್ಲಿ ಬಳಸಲಾಗಿತ್ತು.
ತಿ. ನರಸೀಪುರ ತಾಲೂಕಿನ ಬನ್ನೂರು ವ್ಯಾಪ್ತಿಯಲ್ಲಿ ಇಬ್ಬರನ್ನು ಬಲಿ ಪಡೆದು ಪರಿಸರದಲ್ಲಿ ಭಯವನ್ನುಂಟು ಮಾಡಿತ್ತು. ದಿನನಿತ್ಯ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿತ್ತು.
ಇಂದು ಮುಂಜಾನೆ ತಾಲ್ಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಕರು ತಿನ್ನಲು ಬಂದ ಏಳು ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.