ಮನೆ ರಾಜ್ಯ ಮೈಸೂರು: ಹಸಿರು ಪಟಾಕಿ ಹೊರತುಪಡಿಸಿ ಇತರೆ ಪಟಾಕಿಗಳ ಬಳಕೆಗೆ ನಿಷೇಧ

ಮೈಸೂರು: ಹಸಿರು ಪಟಾಕಿ ಹೊರತುಪಡಿಸಿ ಇತರೆ ಪಟಾಕಿಗಳ ಬಳಕೆಗೆ ನಿಷೇಧ

0

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬವನ್ನು ನವೆಂಬರ್ ೧೧ ರಿಂದ ೧೫ರವರೆಗೆ ಆಚರಿಸಲಿದ್ದು, ಆ ಸಮಯದಲ್ಲಿ ವಿವಿಧ ರೀತಿಯ ಪಟಾಕಿಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ.

ಇದನ್ನು ತಡೆಗಟ್ಟಲು ಸರ್ವೋಚ್ಛ ನ್ಯಾಯಾಲಯವು ಹೊರಡಿಸಿರುವ ಆದೇಶಗಳನ್ನು ತಪ್ಪದೇ ಪಾಲಿಸುವುದು ಸಾರ್ವಜನಿಕರ ಜವಾಬ್ದಾರಿಯಾಗಿರುತ್ತದೆ. ರಾತ್ರಿ ೮ ರಿಂದ ೧೦ ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸ್ಫೋಟಿಸಲು ಅವಕಾಶವಿದ್ದು, ಉಳಿದ ಸಮಯದಲ್ಲಿ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಬಿಟ್ಟು ಇತರೆ ಯಾವುದೇ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಪಟಾಕಿಗಳನ್ನು ಬಳಸುವ ಸಂದರ್ಭದಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು. ಯಾವುದೇ ಸ್ಥಳೀಯ ಆಸ್ಪತ್ರೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತಲಿನ ಹಾಗೂ ಇನ್ಯಾವುದೇ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸ್ಫೋಟಿಸುವಂತಿಲ್ಲ. ಎಲ್ಲಾ ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್‌ ಗಳ ಮೇಲೆ ಚಿಹ್ನೆ ಇರುತ್ತದೆ ಹಾಗೂ ಕ್ಯೂಆರ್ ಕೋಡ್ ಸಹ ಇರುತ್ತದೆ ಎಂದು ಸಾರ್ವಜನಿಕರಿಗೆ ವಿಶೇಷ ಸೂಚನೆ ನೀಡಿದ್ದಾರೆ.

ಪಟಾಕಿ ಮಾರಾಟಗಾರರಿಗೆ ವಿಶೇಷ ಸೂಚನೆಗಳು:

ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಿ, ಅಲ್ಲಿ ಹಸಿರು ಪಟಾಕಿಯಲ್ಲದೇ ಇನ್ಯಾವುದಾರೂ ನಿಷೇಧಿತ ಪಟಾಕಿಗಳ ದಾಸ್ತಾನು ಮಾಡಿದ್ದಲ್ಲಿ ಇಡೀ ಗೋದಾಮನ್ನು ಮುಟ್ಟುಗೋಲು ಮಾಡಲಾಗುವುದು. ಯಾವುದೇ ಹಸಿರು ಪಟಾಕಿಗಳ ಪ್ಯಾಕೇಟ್‌ಗಳನ್ನು ರ್‍ಯಾಂಡಮ್ ಆಗಿ ಸಂಗ್ರಹಿಸಿ, ನಿಗದಿತ ವಿಧಿವಿಧಾನಗಳ ಮೂಲಕ ಅವುಗಳ ಶಬ್ದ ಮಟ್ಟವನ್ನು ಮಾಪನ ಮಾಡಿ, ಅದು ಗುಣಮಾಪನಗಳಿಗೆ ಸರಿ ಹೊಂದದ್ದಿದಲ್ಲಿ ಅವುಗಳನ್ನು ಸಹ ಕೂಡಲೇ ಮುಟ್ಟುಗೋಲು ಮಾಡಿಕೊಳ್ಳಲಾಗುವುದು.

ಹಸಿರು ಪಟಾಕಿಗಳನ್ನಲ್ಲದೇ ಬೇರೆ ನಿಷೇಧಿತ ಪಟಾಕಿಗಳ ಮಾರಾಟ, ದಾಸ್ತಾನು ಮಾಡುವವರ ವಿರುದ್ಧ ಪರಿಸರ ಸಂರಕ್ಷಣೆ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಟ್ಯಾಗ್ಗಳು
  • Mysore
ಹಿಂದಿನ ಲೇಖನಚಾಲಕನ ಅಜಾಗ್ರತೆಯ ಬಸ್ ಚಾಲನೆ: 12 ಮಂದಿ ಪ್ರಯಾಣಿಕರಿಗೆ ಗಾಯ
ಮುಂದಿನ ಲೇಖನಹೆಣ್ಣು ಭ್ರೂಣ ಪತ್ತೆ ಮಾಡುತ್ತಿದ್ದ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆ ದಾಳಿ: ನೋಟಿಸ್ ಜಾರಿ