ಮೈಸೂರು(Mysuru): ‘ಸಾವರ್ಕರ್ ರಥಯಾತ್ರೆ’ಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಎಂಟು ದಿನಗಳ ರಥಯಾತ್ರೆಯು ಅಪ್ರತಿಮ ವೀರನ ಜೀವನ ಮೌಲ್ಯ, ದೇಶ ಪ್ರೇಮದ ಸಂದೇಶವನ್ನು ಸಾರಲಿದೆ. ದೇಶದ್ರೋಹಿಗಳಿಗೂ ಎಚ್ಚರಿಕೆ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಭಾರತ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ. ಜೊತೆಗೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ವೇಳೆ ಕೆಲವರು ದೇಶದ ಹೆಸರಿಗೆ ಮಸಿ ಬಳಿಯುವಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದರು.
ಚಿಲ್ಲರೆ ರಾಜಕಾರಣಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಬ್ರಿಟಿಷರನ್ನು ನಡುಗಿಸಿದ ಸಾವರ್ಕರ್ ಅವರನ್ನು ವಿರೋಧಿಸುವವರು ಮೊದಲು ಬಸವಣ್ಣನವರ ವಚನಗಳನ್ನು ಓದಿಕೊಳ್ಳಲಿ ಎಂದರು.
ಸಚಿವರಾದ ಕೆ.ಸಿ. ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಸಾರ್ವಕರ್ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ, ರಥಯಾತ್ರೆ ಸಂಚಾಲಕ ರಜತ್, ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಹರ್ಷವರ್ಧನ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ನಿಗಮ ಮಂಡಳಿಗಳ ಅಧ್ಯಕ್ಷರಾದ ಎಸ್.ಮಹದೇವಯ್ಯ, ಎಂ.ಶಿವಕುಮಾರ್, ಪಾಲಿಕೆ ಸದಸ್ಯರಾದ ಶಿವಕುಮಾರ್, ಎಂ.ಯು.ಸುಬ್ಬಯ್ಯ ಇದ್ದರು.
ಮೂರು ಜಿಲ್ಲೆಗಳಲ್ಲಿ ಸಂಚಾರ: ವಿ.ಡಿ.ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿ ದಾನವನ್ನು ಜನರಿಗೆ ಪರಿಚಯಿಸಲು ರಥಯಾತ್ರೆಯು ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಲಿದೆ.
23ರಂದು ನಗರದ ಟೆರಿಷಿಯನ್ ಕಾಲೇಜು ಮಾರ್ಗವಾಗಿ ಕ್ಯಾತಮಾರನಹಳ್ಳಿ, ತಿಲಕ್ ನಗರ, ಚಾಮುಂಡಿಪುರಂ, ವಿವೇಕಾನಂದ ನಗರ ಸೇರಿದಂತೆ ನರಸಿಂಹರಾಜ, ಚಾಮರಾಜ, ಚಾಮುಂಡೇಶ್ವರಿ ಕ್ಷೇತ್ರದ ವಿವಿಧೆಡೆ ರಥಯಾತ್ರೆ ಸಂಚರಿಸಲಿದೆ.
24 ರಂದು ಎಚ್.ಡಿ.ಕೋಟೆ, ಸರಗೂರು, 25, 26 ರಂದು ನಂಜನಗೂಡು ಮೂಲಕ ಚಾಮರಾಜನಗರ ಜಿಲ್ಲೆ, 27 ರಿಂದ 29 ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. ಮೈಸೂರಿನಲ್ಲಿ 30 ರಂದು ಸಮಾರೋಪಗೊಳ್ಳಲಿದೆ.