ಮನೆ ಸುದ್ದಿ ಜಾಲ ಮೈಸೂರು: ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ

ಮೈಸೂರು: ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ

0

ಮೈಸೂರು(Mysuru): ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರಗತಿಯ ಪ್ರತಿಮೆ ಅನಾವರಣ ಪ್ರಯುಕ್ತ, ನಗರದ ವ್ಯಾಪ್ತಿಯಲ್ಲಿ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹಿಸುವ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಇಲ್ಲಿನ ಅರಮನೆಯ ಆವರಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಎರಡು ಅಲಂಕೃತ ವಾಹನಗಳಿಗೆ (ಕೆಂಪೇಗೌಡ ರಥ) ಚಾಲನೆ ನೀಡಲಾಯಿತು.

ಕಲಾತಂಡಗಳ ಹಾಜರಿ ವಿಶೇಷ ಮೆರುಗು ನೀಡಿತು.

ನಾಡಿಗೆ ಕೆಂಪೇಗೌಡರು ನೀಡಿರುವ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ದೊಡ್ಡ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಇದೇ ವೇಳೆ, ಸಮಾಜದಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನಗಳು ನಗರದಾದ್ಯಂತ ಸಂಚರಿಸಿ ಮಣ್ಣು ಸಂಗ್ರಹಿಸಲಿವೆ. ಅದನ್ನು ಬೆಂಗಳೂರಿಗೆ ರವಾನಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.

ಎರಡು ದಿನಗಳವರೆಗೆ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ವಾಹನಗಳು ಸಂಚರಿಸಲಿವೆ. ವಲಯ ಕಚೇರಿಗಳ ಸಹಾಯಕ ಆಯುಕ್ತರಿಗೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ ಹಾಗೂ ಒಕ್ಕಲಿಗ ಸಮಾಜದ ಮುಖಂಡರು ಭಾಗವಹಿಸಿದ್ದರು.