ಮೈಸೂರು : ಅರಮನೆ ನಗರಿ ಮೈಸೂರಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, 2ನೇ ದಿನವೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಎರಡನೇ ದಿನ ದಸರಾದಲ್ಲಿ ಇವತ್ತು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ.
ಈಗಾಗಲೇ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಬೆಳಗ್ಗೆ 10.30ಕ್ಕೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಂಚಕಾವ್ಯದ ಕವಿಗೋಷ್ಠಿ ಉದ್ಘಾಟನೆ ಆಗಲಿದೆ. ಮೈಸೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನಪೀಠದಲ್ಲಿ ಈ ಒಂದು ಕವಿಗೋಷ್ಠಿ ನಡೆಯಲಿದೆ.
ಇನ್ನು ಬಳಿಕ ಬೆಳಿಗ್ಗೆ 11 ಗಂಟೆಗೆ ಜೆಕೆ ಮೈದಾನದಲ್ಲಿ ಮಹಿಳಾ ದಸರಾಗೆ ಚಾಲನೆ ನೀಡಲಾಗುತ್ತದೆ. ಮಹಿಳಾ ದಸರಾವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಹಾಗೆಯೇ ಮಧ್ಯಾಹ್ನ 1 ಗಂಟೆಗೆ ಕಲಾಮಂದಿರದಲ್ಲಿ ಮಕ್ಕಳ ದಸರಾಕ್ಕೆ ಚಾಲನೆ ನೀಡಲಾಗುತ್ತಿದೆ ಮಕ್ಕಳ ದಸರಾದಲ್ಲಿ ಸಚಿವ ಮಧು ಬಂಗಾರಪ್ಪ ಸಹ ಭಾಗಿಯಾಗಲಿದ್ದಾರೆ.
ಪ್ರಮುಖವಾಗಿ ಸಂಜೆ 6 ಗಂಟೆಗೆ ಮೈಸೂರಿನಲ್ಲಿ ಯುವ ದಸರ ಉದ್ಘಾಟನೆ ಆಗಲಿದೆ. ಉತ್ತನಹಳ್ಳಿ ಬಳಿ ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ಮೊದಲ ದಿನ ಇವತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ವಿಶ್ವಪ್ರಸಿದ್ಧ ದಸರಾ ಮಹೋತ್ಸವ ಉದ್ಘಾಟನೆಯಾಗಿದ್ದು, ಸಾಹಿತಿ ಬಾನು ಮುಸ್ತಾಕ್ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಮಹದೇವಪ್ಪ ಜತೆಗೂಡಿ ಬಾನು ಮುಸ್ತಾಕ್ ನಾಡ ದೇವಿಗೆ ಮಂಗಳಾರತಿ ನೆರವೇರಿಸಿ ದಸರಾಗೆ ವಿದ್ಯುಕ್ತ ಚಾಲನೆ ನೀಡಿದ್ದಾರೆ.















