ಮನೆ ಸುದ್ದಿ ಜಾಲ ಮೈಸೂರು ಜಿಲ್ಲೆಯ ಮತದಾರರ ಕರಡು ಪಟ್ಟಿ ಪ್ರಕಟ: ಡಾ.ಕೆ.ವಿ.ರಾಜೇಂದ್ರ

ಮೈಸೂರು ಜಿಲ್ಲೆಯ ಮತದಾರರ ಕರಡು ಪಟ್ಟಿ ಪ್ರಕಟ: ಡಾ.ಕೆ.ವಿ.ರಾಜೇಂದ್ರ

0

ಮೈಸೂರು(Mysuru): ಮತದಾರರ ಪಟ್ಟಿಯ ಪರಿಷ್ಕರಣೆ ಸಂಬಂಧ ಕರಡು ಮತದಾರರ ಪಟ್ಟಿಗಳನ್ನು 2022 ರ ನವೆಂಬರ್ 09 ರಂದು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ಸಹಾಯಕ ಮತದಾರರ ನೊಂದನಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.


ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಮತದರಾರರ ಪಟ್ಟಿಯ ಪರಿಷ್ಕರಣೆ ಸಂಬಂಧ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 12,58,679 ಪುರುಷ ಮತದಾರರು, 12,68,934 ಮಹಿಳಾ ಮತದಾರರು ಹಾಗೂ 199 ತೃತೀಯ ಲಿಂಗ ಮತದಾರರು ಸೇರಿದಂತೆ ಒಟ್ಟು 25,27,812 ಮತದಾರರು ಜಿಲ್ಲೆಯಲ್ಲಿ ನೋಂದಣಿಯಾಗಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನವಂಬರ್ 9 ರಂದು ಕರಡು ಮತದಾರರ ಪಟ್ಟಿ ಪ್ರಕಟ ಮಾಡಲಾಗಿದೆ. ನವೆಂಬರ್ 09 ರಿಂದ ಡಿಸೆಂಬರ್ 08 ರವರೆಗೆ ಹಕ್ಕು ಮತ್ತು ಆಕ್ಷೇಪಣಾ ಅವಧಿ (ಹೆಸರು ಸೇರ್ಪಡೆ ತಿದ್ದುಪಡಿ ಮಾಡಲು ಮತ್ತು ತೆಗೆದು ಹಾಕಲು) ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷ ಆಂದೋಲನ ದಿನಾಂಕಗಳನ್ನು ನವಂಬರ್ 12, ಮತ್ತು 20 ಹಾಗೂ ಡಿಸೆಂಬರ್ 03 ಮತ್ತು 04 ರಂದು ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ 26 ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಗೊಳಿಸಲು (ಹೆಸರು ಸೇರ್ಪಡೆ, ತಿದ್ದುಪಡಿ ಮಾಡಲು ಮತ್ತು ತೆಗೆದು ಹಾಕಲು) ಕೊನೆಯ ದಿನಾಂಕವಾಗಿದೆ. ಜನವರಿ 03 ರಂದು ಮತದಾರರ ಪಟ್ಟಿಯ ನಿಯಾತಂಕಗಳ ಪರಿಶೀಲನೆ ಹಾಗೂ ಚುನಾವಣಾ ಆಯೋಗದಿಂದ ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಗೆ ಅನುಮತಿ ಪಡೆಯುವುದು, ಡಾಟಾಬೇಸನ್ನು ಕಾಲೋಚಿತಗೊಳಿಸಿ ಪೂರಕ ಪಟ್ಟಿಗಳ ಮುದ್ರಣವನ್ನು ಪಡೆಯಬಹುದು. ಜನವರಿ 05 ರಂದು ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾ ಅಧಿಕಾರಿಗಳು ಕರ್ನಾಟಕ ರಾಜ್ಯ ಇವರ ಅಧಿಕೃತ ಜಾಲತಾಣ  https://ceo.karnataka.gov.in  ನಲ್ಲಿ ಲಭ್ಯವಿದ್ದು ಸಾರ್ವಜನಿಕರು ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸುವುದು ಹಾಗೂ ಸರಿಯಾದ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸಿದ ಬಗ್ಗೆ ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಜನತಾ ಪ್ರಾತಿನಿಧ್ಯ ಕಾಯಿದೆ 1950 ರ ಪ್ರಕರಣ 14(ಬಿ) ಮತ್ತು ಮತದಾರರ ನೋಂದಣಿ ನಿಯಮಗಳು 1960 ರಲ್ಲಿ ಸೂಕ್ತ ತಿದ್ದುಪಡಿ ಮಾಡಲಾಗಿದ್ದು, ಪ್ರಸ್ತುತ ಜಾರಿಯಲ್ಲಿರುವ ಜನವರಿ, 01 ರ ಅರ್ಹತಾ ದಿನಾಂಕದ 66 ಜೊತೆಗೆ 01ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್” ರಂದು ಹೆಸರುಗಳ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ 2023 ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ 01 ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್ 2022ಕ್ಕೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರಿಂದ 18 ವರ್ಷಗಳನ್ನು ಪೂರೈಸಿದ ಯುವಕರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆವರೆಗೆ ಕಾಯುವುದನ್ನು ತಪ್ಪಿಸಲಾಗಿದೆ ಹಾಗೂ ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.
ಈ ಮೊದಲು ಒಂದು ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತಕ್ಕಾಗಿ ಚಾಲ್ತಿಯಲ್ಲಿದ್ದ ಅರ್ಜಿ ನಮೂನೆ-8ಎ ಯನ್ನು ರದ್ದುಪಡಿಸಲಾಗಿದ್ದು, ಅದರಲ್ಲಿದ್ದ ಸೌಲಭ್ಯವನ್ನು ಪರಿಷ್ಕರಿಸಿದ ನಮೂನೆ-8 ರಲ್ಲಿ ಒದಗಿಸಲಾಗಿದೆ ಎಂದರು.
ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ:
ಮತದಾರರ ಪಟ್ಟಿಯಲ್ಲಿನ ಮತದಾರರನ್ನು ದೃಢೀಕರಣದ ಉದ್ದೇಶದಿಂದ ಹೊಸದಾಗಿ ನಮೂನೆ-6 ಬಿ ಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ದೃಢೀಕರಿಸಲು ಅವಕಾಶ ನೀಡಲಾಗಿದೆ. ಇದು ಮತದಾರರಿಗೆ ಸ್ವಯಂಪ್ರೇರಿತ ಅವಕಾಶವಾಗಿದ್ದು, ಆಧಾರ್ ಮಾಹಿತಿ ಒದಗಿಸಲು ಸಾಧ್ಯವಾಗದಿದ್ದಲ್ಲಿ ಮನೇಗಾ ಉದ್ಯೋಗ ಕಾರ್ಡು, ಬ್ಯಾಂಕ್/ಅಂಚೆ ಕಛೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್ ಪುಸ್ತಕಗಳು, ಕಾರ್ಮಿಕ ಮಂತ್ರಾಲಯದ ಯೋಜನೆಯಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡು, ಡ್ರೈವಿಂಗ್ ಲೈಸೆನ್ಸ್, ಎನ್.ಪಿ.ಆರ್ ಅಡಿಯಲ್ಲಿ ಆರ್.ಜಿ.ಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್ ಪೋರ್ಟ್,ಪಾನ್‌ಕಾರ್ಡ್, ಎನ್ ಪಿ ಆರ್ ಅಡಿಯಲ್ಲಿ ಆರ್‌ಜಿಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ ರಾಜ್ಯ ಸರ್ಕಾರ / ಸಾರ್ವಜನಿಕ ವಲಯದ ಉದ್ದಿಮೆಗಳು / ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸತ್ ಸದಸ್ಯರು/ವಿಧಾನಸಭಾ ಸದಸ್ಯರು/ ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಒದಗಿಸಿ ದೃಢೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನಮೂನೆ-6 ಬಿ ಯಲ್ಲಿ ಮಾಹಿತಿ ದೃಢೀಕರಿಸಲು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅವಕಾಶವಿದೆ. ಆನ್‌ಲೈನ್ ವ್ಯವಸ್ಥೆಯಡಿ ಎನ್‌ವಿಎಸ್‌ಪಿ  (NVSP) ) ಮತ್ತು ವೋಟರ್ ಹೆಲ್ಪ್’ಲೈನ್ ಆಪ್’ನಲ್ಲಿ (VHA)    ಮತದಾರರು ಮಾಹಿತಿಯನ್ನು ದೃಡೀಕರಿಸಲು ಅವಕಾಶವಿದೆ. ಆಧಾರ್ ಸ್ವಯಂ ದೃಢೀಕರಣಕ್ಕೆ ಆಧಾರ್ ಜೋಡಣೆಯಾಗಿರುವ ಮೊಬೈಲ್‌ಗೆ ಸ್ವೀಕೃತವವಾಗುವ ಒಟಿಪಿ (OTP) ಸೌಲಭ್ಯವನ್ನು ಒದಗಿಸಲಾಗಿದೆ.
ಆಧಾರ್ ಜೋಡಣೆಯನ್ನು ಮತದಾರರು ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿಕೊಳ್ಳುವ ಅವಕಾಶವಿದ್ದು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಆಧಾರ್ ಜೋಡಣೆ ಪ್ರಗತಿಯು ಕಡಿಮೆ ಪ್ರಮಾಣದಲ್ಲಿದೆ. ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

1950-ಮತದಾರರ ಸಹಾಯವಾಣಿ: ಮತದಾರರ ಪಟ್ಟಿಯ ಪರಿಷ್ಕರಣೆಯ ಸಲುವಾಗಿ 1950- ಮತದಾರರ ಸಹಾಯವಾಣಿಯನ್ನು ಪ್ರಾರಂಭಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳವರು ಈ ಸಹಾಯವಾಣಿಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.

ಕಂಟ್ರೋಲ್ ರೂಂಗಳ ಮಾಹಿತಿ: ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂ, ಚುನಾವಣಾ ಶಾಖೆ ಹಾಗೂ ಮತದಾರರ ನೊಂದಣಾಧಿಕಾರಿ 1 ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿಯ ದೂರವಾಣಿ ಸಂಖ್ಯೆಗಳು ಇಂತಿವೆ.
 ಜಿಲ್ಲಾಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ-1077, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ದೂ.ಸಂ: 08223274175, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ದೂ.ಸಂ: 08223262371, 08223262234, ಹುಣಸೂರು ವಿಧಾನಸಭಾ ಕ್ಷೇತ್ರ ದೂ.ಸಂ: 08222252040, ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ದೂ.ಸಂ: 08228255600, ನಂಜನಗೂಡು ವಿಧಾನಸಭಾ ಕ್ಷೇತ್ರ ದೂ.ಸಂ: 08221-223108, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ದೂ.ಸಂ: 0821-2414811, 0821-2414812, ಕೃಷ್ಣರಾಜ ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರ ದೂ.ಸಂ: 0821-2418800, ವರುಣ ವಿಧಾನಸಭಾ ಕ್ಷೇತ್ರದೂ.ಸಂ:08221-223108, ಟಿ ನರಸೀಪುರ ವಿಧಾನಸಭಾ ಕ್ಷೇತ್ರ ದೂ.ಸಂ: 08227-260210 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಭಾರತ ಚುನಾವಣಾ ಆಯೋಗವು ಈಗಾಗಲೇ ಹೊರಡಿಸಿರುವ ವೇಳಾಪಟ್ಟಿಯಂತೆ 18-19 ವಯಸ್ಸಿನ ಯುವಕ | ಯುವತಿಯರು ಹಾಗೂ ಹೆಸರು ನೋಂದಣಿಯಾಗದ ಅರ್ಹ ಮತದಾರರು, ಅವರ ಹೆಸರುಗಳನ್ನು ಪ್ರತಿಶತ 100% ರಂತ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು, “ಮತದಾರರ ನೋಂದಾವಣಿ ವಿಶೇಷ ಆಂದೋಲನ ಕಾರ್ಯಕ್ರಮವನ್ನು ನವಂಬರ್ 12, ಮತ್ತು 20 ಹಾಗೂ ಡಿಸೆಂಬರ್ 03 ಮತ್ತು 04 ರಂದು ರಂದು ಹಮ್ಮಿಕೊಳಲಾಗಿದ್ದು, ಸದರಿ 4 ದಿನಗಳಂದು ಈಗಾಗಲೇ ಪ್ರತಿ ಮತಗಟ್ಟೆಗಳಿಗೆ ನಿಯೋಜಿಸಿರುವ ಬಿ.ಎಲ್.ಒ (ಮತಗಟ್ಟೆ ಅಧಿಕಾರಿಗಳು) ಮನೆ-ಮನೆ ಸಮೀಕ್ಷೆ ನಡೆಸಲಿದ್ದು, ವಿಶೇಷ ಆಂದೋಲನದ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಮಂಜುನಾಥಸ್ವಾಮಿ, ಚುನಾವಣಾ ತಹಶೀಲ್ದಾರ್ ರಾಮ್ ಪ್ರಸಾದ್ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು.