ಮೈಸೂರು: ಮೈಸೂರು ವಿಭಾಗ ಮಟ್ಟದ ಪಿಂಚಣಿ ಅದಾಲತ್ ಏ.17 ರಂದು ಮೈಸೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಪಿಂಚಣಿ ಅದಾಲತ್ ನಲ್ಲಿ ಚಾಮರಾಜನಗರ, ಹಾಸನ, ಮಂಡ್ಯ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪಿಂಚಣಿದಾರರು ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯ ವಿಡಿಯೋ ಕಾನ್ಫರೆನ್ಸ್ ಹಾಲಿನಲ್ಲಿ ಭಾಗವಹಿಸಬಹುದು.
ಕಾರ್ಯಕ್ರಮದಲ್ಲಿ ಖಜಾನೆಗಳ ಆಯುಕ್ತಾಲಯದ ಪರವಾಗಿ ರಾಜ್ಯ ಪಿಂಚಣಿ ಮತ್ತು ನಿರ್ವಾಹಣಾ ಖಜಾನೆಯ ಅಪರ ನಿರ್ದೇಶಕರಾದ ಡಾ.ವಿ ಭಾಗ್ಯಲಕ್ಷ್ಮಿ, ಡೆಪ್ಯುಟಿ ಅಕೌಂಟೆoಟ್ ಜನರಲ್ ವ್ಯವಸ್ಥಾಪಕರಾದ ಪ್ರಿನ್ಸನ್ ವರ್ಗೀಸ್, ಸಿಪಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐದು ಜಿಲ್ಲೆಯ ಖಜಾನಾಧಿಕಾರಿಗಳು ಭಾಗವಹಿಸಲಿದ್ದು, ಅರ್ಹ ಪಿಂಚಣಿದಾರರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆಯ ಅಪರ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.