ಮೈಸೂರು: ಅರಮನೆ ನಗರಿಯಲ್ಲಿ ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಮನೆ ಮಾಡಿದ್ದು, ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಅಕ್ಟೋಬರ್ 24ರ ವಿಜಯದಶಮಿಯಂದು ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
ದಸರಾ ಮಹೋತ್ಸವ 2023ರ ನಾಲ್ಕನೇ ದಿನವಾದ ಇಂದು (ಅ.18) ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
ಇಂದು ಬೆಳಿಗ್ಗೆ 11ಕ್ಕೆ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಚಿಗುರು ಕವಿಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿ ಚಾಲನೆ ನೀಡಲಾಗುತ್ತದೆ. ಖ್ಯಾತ ಕವಿಯತ್ರಿ ಸವಿತಾ ನಾಗಭೂಷಣ್ ಕವಿಗೋಷ್ಠಿ ಉದ್ಘಾಟನೆ ಮಾಡಲಿದ್ದಾರೆ.
ಬೆಳಿಗ್ಗೆ 11ಕ್ಕೆ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಲಿದ್ದಾರೆ.
ಅರಮನೆ ಆವರಣದಲ್ಲಿ ರಾತ್ರಿ 7ಗಂಟೆಗೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಸಮೂಹ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಭಾಗಿಯಾಗಲಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದಾರೆ. ನಟ ಡಾ. ಶಿವರಾಜಕುಮಾರ್ ಯುವದಸರಾ ಉದ್ಘಾಟನೆ ಮಾಡಲಿದ್ದಾರೆ. ಯುವಜನತೆಯನ್ನ ಸೆಳೆಯುವ ಕಾರ್ಯಕ್ರಮ ಯುವದಸರಾ ಇಂದಿನಿಂದ ನಾಲ್ಕು ದಿನ ನಡೆಯಲಿದೆ.
ಇಂದು ಯುವದಸರಾಗೆ ಸ್ಯಾಂಡಲ್ ವುಡ್ ನಟ, ನಟಿಯರು ಮೆರುಗು ನೀಡಲಿದ್ದಾರೆ. ಸಂಗೀತ ನಿರ್ದೇಶಕ ಸಾಧುಕೋಕಿಲರಿಂದ ಸಂಗೀತ ಕಾರ್ಯಕ್ರಮ ಇರಲಿದೆ.