ಮೈಸೂರು: ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಇನ್ನು 6 ದಿನ ಮಾತ್ರ ಬಾಕಿ ಇದ್ದು, ಈ ಮಧ್ಯೆ ಅರಮನೆಯಲ್ಲಿ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು, ಇಂದು ರತ್ನಖಚಿತ ಸಿಂಹಾಸನ ಜೋಡಣಾ ಕಾರ್ಯ ನೆರವೇರಿತು.
ಬೆಳಗ್ಗೆ 7.15ಕ್ಕೆ ನವಗ್ರಹ ಹೋಮ ಮತ್ತು ಇತರೆ ಶಾಂತಿ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 10.05 ರಿಂದ 10.35ರವರೆಗೆ ಅಂಬಾವಿಲಾಸ ದರ್ಬಾರ್ ಹಾಲ್ ನಲ್ಲಿ ಸಿಂಹಾಸನ ಜೋಡಣೆ ಕಾರ್ಯ ಮಾಡಲಾಯಿತು. ಬೆಳಗ್ಗೆ 11ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಅಶ್ವವನ್ನು ಗೋಶಾಲೆಗೆ ಕರೆತಂದು ಪೂಜೆ ಸಲ್ಲಿಕೆ ಮಾಡಲಾಯಿತು.
ಖಜಾನೆಯಲ್ಲಿದ್ದ ಮುತ್ತು, ರತ್ನ, ಪಚ್ಚೆಯನ್ನ ಸಿಂಹಾಸನ ಒಳಗೊಂಡಿದ್ದು, ಸಿಂಹಾಸನದ ಬಿಡಿ ಭಾಗಗಳು ದರ್ಬಾರ್ ಹಾಲ್ ಗೆ ತಂದು ಆಸನ, ಮೆಟ್ಟಿಲು, ಛತ್ರಿ ಮುಂತಾದ ಬಿಡಿ ಭಾಗಗಳನ್ನು ಜೋಡಣೆ ಮಾಡಲಾಯಿತು.
ನವರಾತ್ರಿಯ ಮೊದಲ ದಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನದ ಮೇಲೆ ಕುಳಿತು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಇನ್ನು ಸಿಂಹಾಸನ ಜೋಡಣೆ ಹಿನ್ನೆಲೆ ಮೈಸೂರು ಅರಮನೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿತ್ತು.














