ಮನೆ ರಾಜ್ಯ ಮೈಸೂರು ದಸರಾ ಸ್ತಬ್ಧ ಚಿತ್ರ: ಮಂಡ್ಯಕ್ಕೆ ಪ್ರಥಮ ಬಹುಮಾನ

ಮೈಸೂರು ದಸರಾ ಸ್ತಬ್ಧ ಚಿತ್ರ: ಮಂಡ್ಯಕ್ಕೆ ಪ್ರಥಮ ಬಹುಮಾನ

0

ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ತೆರೆಬಿದ್ದಿದೆ.ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ಥಬ್ದಚಿತ್ರಗಳ ಪ್ರದರ್ಶನ ಮಾಡಲಾಗಿತ್ತು.ಇದೀಗ ಈ ಸ್ತಬ್ಧಚಿತ್ರಗಳಿಗೆ ಬಹುಮಾನ ಘೋಷಣೆ ಮಾಡಲಾಗಿದೆ.

Join Our Whatsapp Group


ನಾಡಹಬ್ಬ ಮೈಸೂರು ದಸರಾ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಮಂಡ್ಯ ಜಿಲ್ಲೆ ಸಾದರಪಡಿಸಿದ ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಆಣೆಕಟ್ಟು ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ ಪಡೆದಿದೆ.


ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯ ಹಿರಿಮೆ ಮತ್ತು ಪ್ರತಿಷ್ಠೆಯಾದ ವಿಶ್ವವಿಖ್ಯಾತ ಕೆಆರ್‌ಎಸ್ ಜಲಾಶಯ ಹಾಗೂ ರಂಗನತಿಟ್ಟು ಪಕ್ಷಿಧಾಮದ ಪ್ರತಿರೂಪ ಮಾದರಿಯನ್ನು ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನ ಮಾಡಲಾಗಿತ್ತು. ಕರ್ನಾಟಕದ ಪಕ್ಷಿಕಾಶಿ ಎಂದೇ ಹೆಸರುವಾಸಿಯಾಗಿರುವ ರಂಗನತಿಟ್ಟು ಪಕ್ಷಿಧಾಮ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆದಿತ್ತು. ದಸರಾ ಮಹೋತ್ಸವದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಜಿಲ್ಲೆಗೆ ಹಮ್ಮೆಯ ವಿಷಯವಾಗಿದೆ.


ಧಾರವಾಡ ಜಿಲ್ಲೆಯ ಇಸ್ರೋ ಗಗನಯಾನದ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ ಪಡೆದರೆ, ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡಿನ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಲಭ್ಯವಾಗಿದೆ. ಉಡುಪಿ, ಗದಗ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗೆ ಸಮಾಧಾನಕರ ಬಹುಮಾನ ನೀಡಲಾಗಿದೆ.


ಇನ್ನು ಇಲಾಖೆಯ ಸ್ತಬ್ಧಚಿತ್ರಗಳಲ್ಲಿ ವಾರ್ತಾ ಇಲಾಖೆಯ ವಿಶ್ವಗುರು ಬಸವಣ್ಣ ಮಹಾತ್ಮ ಗಾಂಧಿ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಸಿಕ್ಕಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ದ್ವಿತೀಯ ಬಹುಮಾನ ಮತ್ತು ಕರ್ನಾಟಕ ಸಾಬೂನು ಮತ್ತು‌ ಮಾರ್ಜಕ ನಿಯಮಿತಕ್ಕೆ ಮೂರನೇ ಬಹುಮಾನ ನೀಡಲಾಗಿದೆ. ಅರಣ್ಯ ಇಲಾಖೆ, ಕಾರ್ಮಿಕ‌ ಇಲಾಖೆ, ವಾಕ್ ಮತ್ತು ಶ್ರವಣ ಸಂಸ್ಥೆ, ಕೈಗಾರಿಕಾಭಿವೃದ್ಧಿ ನಿಗಮಕ್ಕೆ ಸಮಾಧಾನಕರ ಬಹುಮಾನ ಲಭಿಸಿದೆ.


ಮೈಸೂರು ದಸರಾ ಮಹೋತ್ಸವ ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು 51 ಸ್ತಬ್ಧಚಿತ್ರಗಳ ಪ್ರದರ್ಶನಗೊಂಡಿವೆ.ಮೈಸೂರು ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಈ ಸ್ತಬ್ಧ ಚಿತ್ರ ನಿರ್ಮಾಣ ಕಾರ್ಯ ಮಾಡಲಾಗಿತ್ತು. 31 ಆಯಾ ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯ , ಆಚಾರ ವಿಚಾರ, ಭೌಗೋಳಿಕ ಹಿನ್ನೆಲೆ ಸಾರುವ ಸ್ತಬ್ಧಚಿತ್ರಗಳು ಒಳಗೊಂಡಿದ್ದವು.