ಮೈಸೂರು: ಮೈಸೂರು ತಾಲ್ಲೂಕಿನ ಕಡಕೋಳ ಬಳಿ ಇರುವ ಕೆ.ಎನ್.ಹುಂಡಿಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಟೋಲ್ ಪ್ಲಾಜಾವನ್ನು ಸ್ಥಳಾಂತರಿಸಿ, ಸದರಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದೆ.
ಕಡಕೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆ.ಎನ್.ಹುಂಡಿ ಟೋಲ್ ಪ್ಲಾಜಾ ನಿಯಮ ಬಾಹಿರವಾಗಿ NHAI ಗೈಡ್ ಲೈನ್ಸ್ ಪಾಲಿಸದೆ ಹದಗೆಟ್ಟ ರಸ್ತೆಯಿಂದ ಟೋಲ್ ಸಂಗ್ರಹ ಮಾಡುತ್ತಿರುವ ಕುರಿತು ಈಗಾಗಲೇ ಪ್ರತಿಭಟನೆಯನ್ನು ರೈತಸಂಘದ ವತಿಯಿಂದ ನಡೆಸಲಾಗಿದೆ. ಮಾತ್ರವಲ್ಲದೇ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಟೋಲ್ ಪ್ಲಾಜಾದಲ್ಲಿ ಅನೇಕ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದೆ.
ಯಾವ ನಿಯಮಗಳು ಉಲ್ಲಂಘನೆಯಾಗಿವೆ ?
ಕೆ.ಎನ್.ಹುಂಡಿ ಟೋಲ್ ಪ್ಲಾಜಾದಿಂದ ನ್ಯಾಷನಲ್ ಹೈವೇ ರಸ್ತೆಯು ತನ್ನ ಗುಣಮಟ್ಟವನ್ನು ಕಳೆದುಕೊಂಡು ಹಾಳಾಗಿರುವುದಲ್ಲೇ ನ್ಯಾಷನಲ್ ಹೈವೇ ಎಂಬುದಾಗಿ ಕಂಡುಬರುವುದಿಲ್ಲ.
NHAI ವತಿಯಿಂದ ಒದಗಿಸಿರುವ ತುರ್ತು ಸಂಪರ್ಕ ಸಹಾಯವಾಣಿ ಸಂಖ್ಯೆ1033 ಿದು ಬಹುತೇಕ ಸಂದರ್ಭಗಳಲ್ಲಿ ಸಂಪರ್ಕಕ್ಕೆ ಸಿಗುವುದಿಲ್ಲ.
ಟೋಲ್ ರಸ್ತೆಯಲ್ಲಿ ಪ್ರಯಾಣಿಸುವಾಗ ವಾಹನವು ಕೆಟ್ಟು ಹೋದರೆ ವಾಹನವನ್ನು ಎಳೆಯುವ ಜವಬ್ದಾರಿ NHAI ವತಿಯಿಯಂದ ಒದಗಿಸುವ ಇನ್ಸಿಡೆಂಟ್ ಮ್ಯಾನೇಜ್ ಮೆಂಟ್ ಸರ್ವಿಸಸ್ ನ್ನು ಕೆ.ಎನ್.ಹುಂಡಿ ಟೋಲ್ ರಸ್ತೆ ವ್ಯಾಪ್ತಿಗೆ ಈವರೆಗೆ ಜಾರಿ ಮಾಡಿಲ್ಲ. ಇಂತಹ ಸೇವೆ ಒದಗಿಸದೇ ನಿಯಮ ಬಾಹಿರವಾಗಿ ಸದರಿ ರಸ್ತೆಗೆ ಟೋಲ್ ಸಂಗ್ರಹಿಸಲಾಗುತ್ತಿದೆ.
ಯಾವುದೇ ಪೌರಾಡಳಿತ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಪ್ರದೇಶದಿಂದ 5 ಕಿ.ಮೀ ವ್ಯಾಪ್ತಿಯೊಳಗೆ ಪರ್ಮನೆಂಟ್ ಬ್ರಿಡ್ಜ್, ಬೈಪಾಸ್, ಟನಲ್ ನಿರ್ಮಿಸಿ ಸದರಿ ಪಟ್ಟಣದ ಸ್ಥಳೀಯರಿಗೆ ಸ್ಥಳೀಯ ಪ್ರದೇಶಗಳಿಗೆ ಓಡಾಡಲು ಅವಕಾಶ ಮಾಡಿಕೊಟ್ಟ ಪಕ್ಷದಲ್ಲಿ ಪಟ್ಟಣದಿಂದ 5ಕಿ.ಮೀ ವ್ಯಾಪ್ತಿಯೊಳಗೆ ಟೋಲ್ ಪ್ಲಾಜಾ ನಿರ್ಮಿಸಲು ಕಾನೂನಿನಡಿ ಅವಕಾಶವಿರುತ್ತದೆ. ಈ ನಿಯಮಗಳನ್ನು ಮೀರಿ ಕೆ.ಎನ್.ಹುಂಡಿ ಟೋಲ್ ಪ್ಲಾಜಾ ಕಡಕೋಳ ಪಟ್ಟಣ ಪಂಚಾಯಿತಿಯಿಂದ ಕೇವಲ 2.5 ಕಿ.ಮೀ ದೂರದಲ್ಲಿದ್ದು, ನ್ಯಾಷನಲ್ ಹೈವೇ ವತಿಯಿಂದ ಸ್ಥಳೀಯರಿಗೆ ಓಡಾಡಲು ಯಾವುದೇ ಪರ್ಮನೆಂಟ್ ಬ್ರಿಡ್ಜ್, ಬೈಪಾಸ್, ಟನಲ್ ಗಳನ್ನು ನಿರ್ಮಿಸಿಲ್ಲ. ಇದರಿಂದಾಗಿ ಸ್ಥಳೀಯರು ಪೂರ್ಣ ಶುಲ್ಕ ಪಾವತಿಸಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಇದು ಕಾನೂನು ಬಾಹಿರ ಮತ್ತು ಅಕ್ರಮವಾಗಿದೆ.
ಇದರಿಂದ ಸ್ಥಳೀಯರು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದ್ದು, ಕೂಡಲೇ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸದರಿ ಅನಧಿಕೃ ಟೋಲ್ ಪ್ಲಾಜಾವನ್ನು ಅತಿ ಶೀಘ್ರವಾಗಿ ಸ್ಥಳಾಂತರಿಸಲು ರೈತ ಸಂಘ ಒತ್ತಾಯಿಸಿದೆ.
ಅಂತೆಯೇ NHAI ಗೈಡ್ ಲೈನ್ ಪ್ರಕಾರ ಸದರಿ ರಸ್ತೆಯ ಹೈವೇ ಗುಣಮಟ್ಟವನ್ನು ಕಾಯ್ದುಕೊಂಡು ಅನುಸರಿಸಬೇಕಾದ ನಿಯಮಗಳನ್ನು ಅನುಸರಿಸಲು ಸೂಚಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.