ಮನೆ ಸುದ್ದಿ ಜಾಲ ಮೈಸೂರು: ಡಿ. 24ರಿಂದ ಜ. 2ರವರೆಗೆ ಫಲಪುಷ್ಪ, ಛಾಯಾಚಿತ್ರ ಹಾಗೂ ಗೊಂಬೆ ಪ್ರದರ್ಶನ

ಮೈಸೂರು: ಡಿ. 24ರಿಂದ ಜ. 2ರವರೆಗೆ ಫಲಪುಷ್ಪ, ಛಾಯಾಚಿತ್ರ ಹಾಗೂ ಗೊಂಬೆ ಪ್ರದರ್ಶನ

0

ಮೈಸೂರು(Mysuru): ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣದಲ್ಲಿ ಡಿ. 24ರಿಂದ ಜ. 2ರವರೆಗೆ ಫಲಪುಷ್ಪ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ಗೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.

ಕೊರೊನಾ ಭೀತಿಯಿಂದ ಎರಡು ವರ್ಷ ಮಾಗಿ ಉತ್ಸವ ನಡೆಯದೆ ಪ್ರವಾಸೋದ್ಯಮ ಸೊರಗಿತ್ತು. ಆದರೆ, ಈ ವರ್ಷ ಮಾಗಿ ಉತ್ಸವ ಮಾಡಲು ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, 50 ಲಕ್ಷ ರೂ. ಅನುದಾನ ಕೋರಿ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ ಸರಕಾರ ಅನುದಾನ ಕೊಟ್ಟರೆ ಮಾಗಿ ಉತ್ಸವ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆಗೆ ಭೇಟಿ ನೀಡಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ನಿತ್ಯ ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಿದ್ಯುತ್ ದೀಪಾಲಂಕಾರ, ಪೊಲೀಸ್ ಬ್ಯಾಂಡ್, ಶಬ್ದರಹಿತ ಪಟಾಕಿ ಸಿಡಿಸುವುದೂ ಸೇರಿ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಂಜೆ 7ರಿಂದ 9ರವರೆಗೆ ಅರಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿರುತ್ತದೆ.

ಫಲಪುಷ್ಪ ಪ್ರದರ್ಶನ

ಸುಮಾರು 25,000 ಬಗೆಯ ಅಲಂಕಾರಿಕ ಹೂವಿನ ಗಿಡ (ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸ್ವಿಲೋಷಿಯ, ನಸ್ಪರ್ಸಿಯಂ, ಆಂಟಿರೈನಂ, ಬೋನ್ಸಾತ್ ಗಿಡಗಳು ಸೇರಿದಂತೆ 32 ಜಾತಿಯ ಹೂವಿನ ಗಿಡ) ಹಾಗೂ ಅಂದಾಜು 4 ಲಕ್ಷ ವಿವಿಧ ಹೂವುಗಳಾದ ಗುಲಾಬಿ, ಕ್ರೈಸಾಂಥಿಯಮ್, ಪಿಂಗ್ ಪಾಂಗ್, ಕಾರ್ನೆಷನ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂಡೈಸಿ, ಡ್ರೆಸಿನಾ ಸೇರಿ ನಾನಾ ಬಗೆಯ ಅಲಂಕಾರಿಕ ಹೂಗಳಿಂದ ಅಲಂಕರಿಸಲಾಗುತ್ತದೆ. ಹೂಗಳಲ್ಲಿಅರಳಲಿರುವ ಕಾಶಿ ವಿಶ್ವನಾಥ ದೇವಾಸ್ಥಾನ ಮಾದರಿ ಈ ಬಾರಿ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆ ಆಗಲಿದೆ.

ಖ್ಯಾತ ಹಾಕಿಪಟು ಧ್ಯಾನ್ ಚಂದ್, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ಯೋಗಾ ಫಾರ್ ಲೈಫ್, ರಾಜವಂಶಸ್ಥರಾದ ಜಯಚಾಮರಾಜ ಒಡೆಯರ್ ಅವರು ಸರ್ ಎಂ ವಿಶ್ವೇಶ್ವರಯ್ಯ ಅವರ ಜೊತೆ ಕುಳಿತು ಸಂಭಾಷಣೆ ನಡೆಸುತ್ತಿರುವ ಮಾದರಿಯನ್ನೂ ಹೂವಿನಿಂದ ಅಲಂಕರಿಸಲಾಗುತ್ತದೆ. 2022ರ ದಸರಾದಲ್ಲಿ ಭಾಗವಹಿಸಿದ್ದ ಲಕ್ಷ್ಮಿ ಹಾಗೂ ಅದರ ಮರಿ ದತ್ತಾತ್ರೇಯ, ಅಮರ್ ಜವಾನ್ ಯುದ್ಧ ಸ್ಮಾರಕ, ಪದ್ಮಶ್ರೀ ಭಗೀರಥಿ ಆಮೈ ಮಾದರಿ ಚಿತ್ರಗಳು ಈ ಬಾರಿ ಜನರನ್ನು ಆಕರ್ಷಿಸಲಿವೆ.

ಛಾಯಾಚಿತ್ರ ಪ್ರದರ್ಶನ: ಫಲಪುಷ್ಪ ಪ್ರದರ್ಶನದಲ್ಲಿಛಾಯಾಚಿತ್ರ ಪ್ರದರ್ಶನವನ್ನು ‘ದಸರಾ ಅಂದು-ಇಂದು’ ಶೀರ್ಷಿಕೆಯಡಿ ಏರ್ಪಡಿಸಲಾಗುತ್ತಿದೆ. ದಸರಾ ವೈಭವಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದಸರಾ ನವರಾತ್ರಿ ವೇಳೆ ವಿಶೇಷವಾಗಿ ಮನೆಯಲ್ಲಿಗೊಂಬೆ ಕೂರಿಸಿದ್ದ ಐವರಿಗೆ ಈ ಬಾರಿ ಅರಮನೆ ಆವರಣದಲ್ಲಿಗೊಂಬೆ ಜೋಡಿಸಲು ಅವಕಾಶ ಕಲ್ಪಿಸಲಾಗಿದೆ.

ಹೊಸ ವರ್ಷ ಬಣ್ಣದ ಚಿತ್ತಾರ: ಅರಮನೆ ಮಂಡಳಿ ವತಿಯಿಂದ ಹೊಸ ವರ್ಷಾಚರಣೆ ಪ್ರಯುಕ್ತ ಡಿ. 31ರಂದು ಪೊಲೀಸ್ ಬ್ಯಾಂಡ್ ಅನ್ನು ರಾತ್ರಿ 11ರಿಂದ 12ರವರೆಗೆ ಆಯೋಜಿಸಲಾಗಿದೆ. ರಾತ್ರಿ 12ರಿಂದ 12.15ರವರೆಗೆ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಶಬ್ಧ ರಹಿತ ಪಟಾಕಿ ಸಿಡಿಸುವ ಕಾರ್ಯಕ್ರಮವೂ ಇದೆ.