Saval TV on YouTube
ಮೈಸೂರು(Mysuru): 43 ಜನರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಸರಕಾರಕ್ಕೆ 89 ಲಕ್ಷ ರೂ. ವಂಚಿಸಿರುವ ಪ್ರವಾಸೋದ್ಯಮ ಇಲಾಖೆಯ ಇಬ್ಬರು ನೌಕರರ ವಿರುದ್ಧ ದೂರು ನೀಡಲಾಗಿದೆ.
ಇಲಾಖೆಯ ಪ್ರಥಮ ದರ್ಜೆ ಸಹಾಯಕ, ಡಿಟಿಸಿ ವಿರುದ್ಧ ಅದೇ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಬಿ.ರಾಘವೇಂದ್ರ, ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲೇನಿದೆ ?
”ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ಸಂಬಂಧ 2ರಿಂದ 3 ಲಕ್ಷ ರೂ.ವರೆಗೆ ಪ್ರವಾಸೋದ್ಯಮ ಇಲಾಖೆಯಿಂದ ಸಹಾಯಧನ ಒದಗಿಸುವ ಯೋಜನೆ ಜಾರಿಯಲ್ಲಿದೆ. 2022ರಲ್ಲಿ 117 ಫಲಾನುಭವಿಗಳ ಪೈಕಿ 78 ಮಂದಿಗೆ 1.79 ಕೋಟಿ ರೂ. ನೆರವು ವಿತರಿಸಲಾಗಿತ್ತು. ಈ ವರ್ಷದಲ್ಲಿ ಜನವರಿಯಿಂದ ಜುಲೈನಲ್ಲಿ ಅರ್ಜಿ ಸಲ್ಲಿಸದ 43 ವ್ಯಕ್ತಿಗಳ ಹೆಸರಿನಲ್ಲಿ ಇಲಾಖೆಯ ಲೆಟರ್ ಹೆಡ್ ಬಳಸಿ, ನಕಲಿ ಸಹಿ ಬಳಸಿ ಇಬ್ಬರು ನೌಕರರು 89 ಲಕ್ಷ ರೂ. ವಂಚಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ತಿಳಿಸಿದ್ದಾರೆ.