ಮನೆ ಸುದ್ದಿ ಜಾಲ ಹೊಸ ವರ್ಷ ಸ್ವಾಗತಿಸಲು ಸಜ್ಜಾದ ಮೈಸೂರು: ನಗರದಾದ್ಯಂತ ಪೊಲೀಸರ ಕಣ್ಗಾವಲು

ಹೊಸ ವರ್ಷ ಸ್ವಾಗತಿಸಲು ಸಜ್ಜಾದ ಮೈಸೂರು: ನಗರದಾದ್ಯಂತ ಪೊಲೀಸರ ಕಣ್ಗಾವಲು

0

ಮೈಸೂರು(Mysuru): ಕೋವಿಡ್ ನೂತನ ವರ್ಷವನ್ನು ಸ್ವಾಗತಿಸಲು ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು, ಡಿ. 31ರ ರಾತ್ರಿ ಹೊಸ ವರ್ಷ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಂತೆ ಹಲವು ಬಿಗಿ ಕ್ರಮ ಕೈಗೊಂಡಿರುವ ನಗರ ಪೊಲೀಸರು, ಇದಕ್ಕಾಗಿ ನಗರದೆಲ್ಲೆಡೆ ಸಿಸಿ ಟಿವಿ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣಿಡಲಿದ್ದಾರೆ.

ನಗರದಲ್ಲಿ ಈಗಾಗಲೇ 59 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಹೊಸದಾಗಿ 275 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಪೊಲೀಸ್ ಕಂಟ್ರೋಲ್ ರೂಂ ಮೂಲಕ ನಿಗಾ ವಹಿಸಲಾಗುತ್ತದೆ. ಇದರೊಂದಿಗೆ ಸಾರ್ವಜನಿಕರು ಅಂಗಡಿ, ಮನೆ ಇತ್ಯಾದಿ ಸ್ಥಳಗಳಲ್ಲಿಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿರುವಂತೆ ನೋಡಿ ಕೊಳ್ಳಬೇಕು. ಮಧ್ಯರಾತ್ರಿ 1 ಗಂಟೆಯೊಳಗೆ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಬೇಕುಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಡಿ.31ರ ರಾತ್ರಿ ರಾತ್ರಿ ಹೊಸ ವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿಓಡಾಡುವ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದು. ಕೀಟಲೆ/ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ನಗರದಲ್ಲಿ 18 ವಿಶೇಷ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಐದು ಸಂಚಾರಿ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆಯು ನಗರದ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಿದೆ.

ಹೊಸ ವರ್ಷಾಚರಣೆ ನೆಪದಲ್ಲಿ ವಾಹನಗಳ ವೀಲ್ಹಿಂಗ್ ಮತ್ತು ಡ್ರಾಗ್ ರೇಸ್ ತಡೆ ಹಾಗೂ ಕರ್ಕಶ ಶಬ್ದ ಮಾಡುವುದನ್ನು ತಪ್ಪಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಐದು ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಲಾಗಿದೆ.

ಮಹಿಳೆಯರ ರಕ್ಷಣೆಗೆ ಪಿಂಕ್ ಗರುಡಾ ತಂಡ

ಮಹಿಳೆಯರ ರಕ್ಷಣೆಗಾಗಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಆರು ವಿಶೇಷ ತಂಡಗಳು ಹಾಗೂ ನಾಲ್ಕು ಪಿಂಕ್ ಗರುಡಾ ತಂಡಗಳನ್ನು ನಿಯೋಜಿಸಲಾಗಿದೆ.

ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಡಿ. 31ರಂದು ರಾತ್ರಿ 7ರ ಬಳಿಕ ಚಾಮುಂಡಿಬೆಟ್ಟಕ್ಕೆ ಉತ್ತನಹಳ್ಳಿ ಕ್ರಾಸ್ ಗೇಟ್, ದೈವಿ ವನ ಗೇಟ್, ಚಾಮುಂಡಿಬೆಟ್ಟ ಪಾದದ ಗೇಟ್, ಲಲಿತಮಹಲ್ ಗೇಟ್ ಮೂಲಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ತಾವರೆಕಟ್ಟೆ ಗೇಟ್ ಮುಖಾಂತರ ಡಿ.31 ರಾತ್ರಿ 9 ಗಂಟೆ ಬಳಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬೆಟ್ಟಕ್ಕೆ ಊಟ, ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಪೊಲೀಸರ ಮಾರ್ಗಸೂಚಿಗಳು

  • ದೊಡ್ಡ ಕಾರ್ಯಕ್ರಮಗಳು ಕಡ್ಡಾಯವಾಗಿ ಹೊರಾಂಗಣ ಹಾಗೂ ಹಗಲಿನಲ್ಲಿಆಯೋಜನೆ ಮಾಡಬೇಕು.
  • ಹೋಟೆಲ್, ಪಬ್, ರೆಸ್ಟೋರೆಂಟ್ ಮತ್ತು ರೆಸಾರ್ಟ್’ಗಳು ಒಳಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮ ನಿಗದಿತ ಸೀಟು ಸಾಮರ್ಥ್ಯ ಮೀರಬಾರದು.
  • ಜನಸಂದಣಿ ಹೆಚ್ಚಾಗದಂತೆ ಕ್ರಮಕೈಗೊಳ್ಳಬೇಕು.ತುರ್ತು ಪರಿಸ್ಥಿತಿ ಎದುರಿಸಲು ತುರ್ತು ಚಿಕಿತ್ಸಾ ವಾಹನದ ವ್ಯವಸ್ಥೆ, ಆಸ್ಪತ್ರೆಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು.
  • ರೆಸ್ಟೋರೆಂಟ್ ಮತ್ತು ಮದ್ಯ ಸರಬರಾಜು ಮಾಡುವ ಹೋಟೆಲ್’ಗಳಲ್ಲಿ ಅಬಕಾರಿ ಇಲಾಖೆಯಿಂದ ಲಿಖಿತವಾಗಿ ಹೆಚ್ಚಿನ ಅವಧಿಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಪೊಲೀಸ್ ಆಯುಕ್ತರ ಕಚೇರಿಯಿಂದಲೂ ಅನುಮತಿ ಪಡೆಯುವುದು.
  • ಡಿ.ಜೆ.ಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಧ್ವನಿವರ್ಧಕ ಅಳವಡಿಸುವವರು ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಬಾಕ್ಸ್ ಮಾದರಿ ಧ್ವನಿವರ್ಧಕ ಬಳಸಬೇಕು.
  • ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ನೃತ್ಯ, ಮಾದಕ ವಸ್ತುಗಳ ಸೇವನೆ, ಜೂಜಾಟ ನಿಷೇಧಿಸಲಾಗಿದೆ.
  • ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿ, ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ.