ಮೈಸೂರು: ನಗರದಲ್ಲಿ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಖೆಡ್ಡಾ ತೋಡಿ, ಹಣ ದೋಚುತ್ತಿದ್ದಂತ ಪೊಲೀಸ್ ಕಾನ್ಸ್ ಸ್ಟೇಬಲ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಠಾಣೆಗೆ ಸೇರಿದ ಪೊಲೀಸ್ ಕಾನ್ಸ್‌ಟೇಬಲ್ ಶಿವಣ್ಣ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಯುವತಿಯರನ್ನು ಉಪಯೋಗಿಸಿ ವ್ಯಾಪಾರಿಯನ್ನು ಬಲೆಗೆ ಬೀಳಿಸಿ ಹಣದ ಬೇಡಿಕೆ ಇಟ್ಟಿದ್ದ ಆರೋಪಗಳಿಗೆ ಈ ತಂಡ ಕೈಜೋಡಿಸಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಜೂನ್ 11ರಂದು ಸಂಜೆ 7.30ರ ಸುಮಾರಿಗೆ ಸುಮಾರು 23 ವರ್ಷದ ಯುವತಿ ದಿನೇಶ್ ಕುಮಾರ್ ಅವರ ಬಟ್ಟೆ ಅಂಗಡಿಗೆ ಭೇಟಿ ನೀಡಿ, ಎರಡು ಲೆಗ್ಗಿಂಗ್ಸ್ ಮತ್ತು ಒಂದು ಟಾಪ್ ಖರೀದಿಸುತ್ತಾಳೆ. ಖರೀದಿಯ ಬಳಿಕ “ಹೊಸ ಡಿಸೈನ್ ಬಟ್ಟೆ ಬಂದರೆ ತಿಳಿಸಿ” ಎಂಬಂತೆ ಮೊಬೈಲ್ ಸಂಖ್ಯೆ ಕೇಳಿ ಪಡೆದುಕೊಳ್ಳುತ್ತಾಳೆ.
ಅಂದೇ ರಾತ್ರಿ 8.45ಕ್ಕೆ ಯುವತಿ ವಾಟ್ಸಪ್‌ನಲ್ಲಿ “ಹಾಯ್” ಮೆಸೇಜ್ ಕಳುಹಿಸುತ್ತಾಳೆ. ಮರು ದಿನ ಬೆಳಿಗ್ಗೆ ದಿನೇಶ್ “ನೀವು ಯಾರು?” ಎಂದು ಪ್ರತಿಕ್ರಿಯಿಸುತ್ತಾರೆ. ನಂತರ ಯುವತಿ ಸ್ನೇಹಪೂರ್ಣ ಸಂದೇಶ ಕಳುಹಿಸಿ, ಸ್ವಂತ ಚಿತ್ರಗಳನ್ನು ವಾಟ್ಸಪ್ ಮೂಲಕ ದಿನೇಶ್‌ಗೆ ಕಳುಹಿಸುತ್ತಾಳೆ. ಜೂನ್ 14ರಂದು ಮದ್ಯಾಹ್ನ 3.30ರ ಸುಮಾರಿಗೆ ಯುವತಿ ದಿನೇಶ್‌ಗೆ ಫೋನ್ ಮಾಡಿ, “ನಾನು ಮನೆಯಲಿ ಒಬ್ಬಳೇ ಇರುತ್ತೇನೆ, ಬನ್ನಿ” ಎಂದು ಮನೆಯನ್ನು ಲೊಕೇಷನ್ ಸೇರಿಸಿ ಕರೆಸಿಕೊಳ್ಳುತ್ತಾಳೆ.
ಸಂಜೆ 4.10ಕ್ಕೆ ದಿನೇಶ್ ಕುಮಾರ್ ಕಾರಿನಲ್ಲಿ ಹೊರಟು, 4.45ಕ್ಕೆ ಮರಡಿಯೂರು ಬಳಿಯಿರುವ ಸ್ಥಳಕ್ಕೆ ತಲುಪುತ್ತಾರೆ. ಯುವತಿ ಕಾರಿನ ಬಳಿ ಬಂದು ಚಿಕ್ಕಮ್ಮನ ಮನೆ ಎಂದು ಒಳಗೆ ಕರೆದುಕೊಂಡು ಹೋಗುತ್ತಾಳೆ. “ಕಾಫಿ ಕುಡಿಯುತ್ತೀರಾ?” ಎಂಬ ಪ್ರಶ್ನೆಯ ನಂತರ ಸಲುಗೆಯಿಂದ ನಿಂತು, ಮೈಮುಟ್ಟಿ ತಬ್ಬಿಕೊಳ್ಳುತ್ತಾಳೆ. ನಂತರ “ಡೋರ್ ಲಾಕ್ ಮಾಡಿ ಬರುತ್ತೇನೆ” ಎಂದು ಹೊರಹೋಗಿ ಬಾಗಿಲು ತೆರೆದೇ ಬಿಡುತ್ತಾಳೆ.
ಇಬ್ಬರೂ ರೂಮಿನಲ್ಲಿ ಇದ್ದಾಗ ಮೂವರು ಅಪರಿಚಿತರು ನುಗ್ಗಿ ದಿನೇಶ್ ಅವರನ್ನು ಥಳಿಸಿ, ಬಟ್ಟೆ ಬಿಚ್ಚಿಸಿ ಫೋಟೋ ಹಾಗೂ ವೀಡಿಯೋ ತೆಗೆಯುತ್ತಾರೆ. ದಿನೇಶ್ ಅವರ ವಿರೋಧದ ನಡುವೆಯೂ ಹಲ್ಲೆ ಮುಂದುವರಿಸುತ್ತಾರೆ. ಬಳಿಕ ಮೂರ್ತಿ ಅಲಿಯಾಸ್ ದಾಸಬೋವಿ ಮತ್ತು ಪೇದೆ ಶಿವಣ್ಣ ಅಲಿಯಾಸ್ ಪಾಪಣ್ಣ ಅಲ್ಲಿ ಬಂದು, “ನಿನ್ನನ್ನು ಬಿಟ್ಟುಕೊಡುವುದಕ್ಕೆ ಹಣ ಕೊಡಬೇಕು” ಎಂದು ₹10 ಲಕ್ಷಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡದಿದ್ದರೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಡಿಸುತ್ತೇವೆ ಎಂದು ಬೆದರಿಸುತ್ತಾರೆ.
ದಿನೇಶ್ ತಮ್ಮ ಸ್ನೇಹಿತ ಮಹೇಂದ್ರ ಚೌದರಿಗೆ ಕರೆ ಮಾಡಿ ಹಣ ತರಲು ಕೇಳುತ್ತಾರೆ. ಆದರೆ ಘಟನೆಯ ವೈಖರಿಯಿಂದ ಅನುಮಾನಗೊಂಡ ಮಹೇಂದ್ರ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡುತ್ತಾರೆ. ಉಪನಿರೀಕ್ಷಕ ರವೀಶ್ ಮಾಹಿತಿ ಪಡೆದು, ಇನ್ಸ್‌ಪೆಕ್ಟರ್‌ಗೆ ವಿಷಯ ತಿಳಿಸುತ್ತಾರೆ. ದಿನೇಶ್ ಕುಮಾರ್ ಅವರಿಗೆ ಇನ್ಸ್ಪೆಕ್ಟರ್ ಕರೆ ಮಾಡಿ ಆರೋಪಿಗಳೊಂದಿಗೆ ಮಾತನಾಡಿದ್ದಾರೆ. ನೀವು ದಿನೇಶ್ ಕುಮಾರ್ ಅವರನ್ನು ಬಿಡದಿದ್ದರೆ ನಮ್ಮ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆರೋಪಿಗಳು ದಿನೇಶ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ, ಮಧ್ಯರಾತ್ರಿ 1.15ರ ವೇಳೆಗೆ ಬೈಲಕುಪ್ಪೆ ಟೌನ್ ರಸ್ತೆಯಲ್ಲಿ ಬಿಡುತ್ತಾರೆ. ದಿನೇಶ್ ಮನೆಯವರಿಗೆ ಕರೆ ಮಾಡಿ ಘಟನೆಯನ್ನು ವಿವರಿಸುತ್ತಾರೆ. ನಂತರ ದಿನೇಶ್ ಅವರ ಸ್ನೇಹಿತರು ಅವರನ್ನು ಮನೆಗೆ ಕರೆದುಕೊಂಡು ಬರುತ್ತಾರೆ.
ಬೆಟ್ಟದಪುರ ಠಾಣೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ತನಿಖೆ ಪ್ರಾರಂಭಿಸಿದರು. ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದಂತ ಕಾನ್ಸ್ ಸ್ಟೇಬಲ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.















