ಮೈಸೂರು: ಕೌಟುಂಬಿಕ ಕಲಹದಿಂದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಹಾಡಹಗಲೇ ಕೊಲೆ ಮಾಡಿದ ಘಟನೆ ವರದಿಯಾಗಿದೆ.
ನಗರದ ಸರ್ಧಾರ್ ವಲ್ಲಭಬಾಯ್ ಪಟೇಲ್ ನಗರ ವೃತ್ತದ ಬಳಿ (ನಾಡನಹಳ್ಳಿ ಗೇಟ್ ) ಬಳಿ ಈ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಶಿಲ್ಪಾ (26) ಮೃತ ಮಹಿಳೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಮಹೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಹೇಶ್- ಶಿಲ್ಪಾ ದಂಪತಿ ಮೂಲತಃ ಚಾಮರಾಜನಗರ ಜಿಲ್ಲೆ, ಸಂತೇಮರಹಳ್ಳಿ ಸಮೀಪದ ನವಿಲೂರಿನವರು. ಈ ದಂಪತಿಗೆ 6 ಹಾಗೂ 4 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿ ಮಹೇಶ್, ಜೂಜಿನ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದ. ಈ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಸೋಮವಾರ ಸಹ ಇದೇ ಕೌಟುಂಬಿಕ ಕಲಹದ ಸಲುವಾಗಿ ಮಡದಿ ಶಿಲ್ಪಾಳನ್ನು ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಶಿಲ್ಪಾ ರ ಕುತ್ತಿಗೆಗೆ ಮಚ್ಚಿನಿಂದ ಏಳೆಂಟು ಬಾರಿ ಕೊಚ್ಚಿದ್ದರಿಂದ ಆಕೆ ನಿತ್ರಾಣಗೊಂಡು ರಕ್ತದ ಮಡುವಿನಲ್ಲಿದ್ದರು.
ವಿಷಯ ತಿಳಿಯುತ್ತಿದ್ದಂತೆ ಆಲನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ರಕ್ತದ ಮಡುವಿನಲ್ಲಿದ್ದ ಶಿಲ್ಪರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟರು.
ಘಟನೆಗೆ ಸಂಬಂಧಿಸಿದಂತೆ ಮಡದಿ ಹತ್ಯೆ ಮಾಡಿ ಪರಾರಿಯಾಗಿದ್ದ ಪತಿ ಮಹೇಶ್ ನನ್ನು ಆಲನಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಸ್ವರ್ಣ ಮತ್ತು ಸಿಬ್ಬಂದಿ ಘಟನೆ ನಡೆದ ದಿನವೇ ಬಂಧಿಸುವಲ್ಲಿ ಯಶಸ್ವಿಯಾಗಿ, ಆರೋಪಿ ಮಹೇಶ್ ನನ್ನು ಜೈಲಿಗಟ್ಟಿದ್ದಾರೆ.