ಮೈಸೂರು(Mysuru): ತಿ.ನರಸೀಪುರದ ಮನೆಯೊಂದರಲ್ಲಿ ಕಳ್ಳತನ ಮಾಡಿದ ಅಂತರರಾಜ್ಯ ಕಳ್ಳನನ್ನು ತಿ. ನರಸೀಪುರ ಪಟ್ಟಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಆಂಧ್ರ ಮೂಲದವನಾಗಿದ್ದು, ಬಂಧಿತ ಆರೋಪಿಯಿಂದ 791.510 ಗ್ರಾಂ ಚಿನ್ನ ಮತ್ತು 499.260 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ಹಿನ್ನೆಲೆ: ಟಿ ನರಸೀಪುರ ಪಟ್ಟಣದಲ್ಲಿರುವ ಶ್ರೀನಿಧಿ ಡಿಸ್ಟ್ರಿಬ್ಯೂಟರ್ಸ್ ಮಾಲೀಕ ಶ್ರೀನಿವಾಸ್ ಅವರ ಮನೆಯ ಡಿಜಿಟಲ್ ಲಾಕರ್ ನಲ್ಲಿಟ್ಟಿದ್ದ ಸುಮಾರು 3 ಕೆ ಜಿ 250 ಗ್ರಾಂ ಚಿನ್ನದ ಒಡವೆಗಳು, 12 ಕೆ ಜಿ ಬೆಳ್ಳಿಯ ಗಟ್ಟಿ ಹಾಗೂ 30 ಲಕ್ಷ ನಗದು ಹಣ ಕಳ್ಳತನವಾಗಿತ್ತು.
ಆರೋಪಿಗಳ ಹೆಜ್ಜೆ ಜಾಡು ಹಿಡಿದ ನರಸೀಪುರ ಪೊಲೀಸರು ಆಂಧ್ರಪ್ರದೇಶದ ಹಿಂದುಪುರ, ಬತ್ತಲಪಲ್ಲಿ, ಪೆನುಕೊಂಡ, ಪುಟ್ಟಪರ್ತಿ, ಪರಿಗಿ, ಧರ್ಮಾವರಂ, ಅನಂತಪುರ, ಹೈದರಾಬಾದ್ ಮೊದಲಾದ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು.
ಖಚಿತ ಮಾಹಿತಿ ಮೇರೆಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹಾಸನ ಜೈಲಿನಲ್ಲಿರುವ ಆರೋಪಿಯೊಂದಿಗೆ ಹಾಗೂ ತನ್ನಿಬ್ಬರು ಸಹಚರರೊಂದಿಗೆ ಟಿ ನರಸೀಪುರ ಪಟ್ಟಣದಲ್ಲಿ ಕಳ್ಳತನ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಇದೇ ಆರೋಪಿಗಳ ತಂಡ ಗದಗ ಜಿಲ್ಲೆ, ಬೈಲಹೊಂಗಲ, ನಿಪ್ಪಾಣಿಗಳಲ್ಲಿಯೂ ಕಳ್ಳತನ ಮಾಡಿರುವ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.