ಮೈಸೂರು: ರಾಷ್ಟ್ರಮಟ್ಟದ ಐದನೇ ‘ಕಿಸಾನ್ ಸ್ವರಾಜ್ ಸಮ್ಮೇಳನ’ವನ್ನು ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ನ.11ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ.
ಬುಧವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾವಯವ ಕೃಷಿಕರ ಮಹಾಮೇಳದಲ್ಲಿ ಬೀಜ ಉತ್ಸವ, ಗೆಡ್ಡೆ ಗೆಣಸು ಮೇಳ, ಕೃಷಿ ಗೋಷ್ಠಿ, ವಸ್ತುಪ್ರದರ್ಶನವಿದೆ. ಸುಸ್ಥಿರ ಕೃಷಿಯ ಕಡೆಗೆ ಹೊರಳಿ ಯಶಸ್ಸು ಸಾಧಿಸಿದ ರೈತರು ಅನುಭವ ಹಂಚಿಕೊಳ್ಳಲಿದ್ದಾರೆ. 23 ರಾಜ್ಯಗಳ ಎರಡು ಸಾವಿರಕ್ಕೂ ಹೆಚ್ಚು ಸಾವಯವ ಕೃಷಿಕರು, ಕೃಷಿ ವಿಜ್ಞಾನಿಗಳು, ತಂತ್ರಜ್ಞರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಾಗತಿಕ ತಾಪಮಾನ ಏರಿಕೆಯು ಕೃಷಿ ವಲಯದ ಮೇಲೆ ಭಾರಿ ಪರಿಣಾಮ ಬೀರಿದೆ. ರೈತರು, ನಗರವಾಸಿಗಳು, ವಿದ್ಯಾರ್ಥಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸದಸ್ಯ ಕೃಷ್ಣ ಪ್ರಸಾದ್ ಮಾತನಾಡಿ, ಸುಭಾಷ್ ಶರ್ಮಾ, ಭರತ್ ಭೂಷಣ ತ್ಯಾಗಿ, ಸಬರಮತಿ, ಡಾ.ದೇವೇಂದ್ರ ಶರ್ಮಾ, ವಿಜಯ್ ಜರ್ದಾರಿ, ಸುರೇಶ್ ದೇಸಾಯಿ ಸೇರಿದಂತೆ ಸಾವಯವ ಕೃಷಿಕರು ಪಾಲ್ಗೊಳ್ಳುತ್ತಿರುವ ಈ ಸಮ್ಮೇಳನವು ಸಾವಯವ ಕೃಷಿಕರ ಕುಂಭಮೇಳವಾಗಿದೆ ಎಂದು ಬಣ್ಣಿಸಿದರು.
ಬೀಜ ಉತ್ಸವದಲ್ಲಿ 18 ರಾಜ್ಯಗಳ 140 ಕೃಷಿ ಬಿತ್ತನೆ ಬೀಜ ಸಂರಕ್ಷಕರು 65 ಮಳಿಗೆಗಳನ್ನು ತೆರೆಯಲಿದ್ದಾರೆ. ಬಾಳೆಮೇಳದಲ್ಲಿ ತಿರುವನಂತರಪುರದ ವಿನೋದ್ ನಾಯರ್ ಅವರು ಸಂರಕ್ಷಿಸಿರುವ 400 ಬಾಳೆ ತಳಿಗಳು ಇವೆ. ಮೊಣಕೈ ಉದ್ದದ ಜಾಂಜಿಬಾರ್ ಬಾಳೆ, ಅಸ್ಸಾಂನ ಭೀಮನ ಬಾಳೆ ಹಾಗೂ ನಂಜನಗೂಡು ರಸಬಾಳೆಯ ಸಸಿಗಳು ಸಿಗಲಿವೆ ಎಂದರು.
ಪರಿಸರ ತಜ್ಞ ಯು.ಎನ್.ರವಿಕುಮಾರ್ ಮಾತನಾಡಿ, ಈಜಿಪ್ಟ್’ನಲ್ಲಿ ಜಾಗತಿಕ ತಾಪಮಾನ ಹೆಚ್ಚಳ ಕುರಿತು ಸಮ್ಮೇಳನ ನಡೆಯುತ್ತಿದ್ದರೆ, ಮೈಸೂರಿನಲ್ಲಿ ಪ್ರತಿಯೊಬ್ಬರ ಸುಸ್ಥಿರ ಜೀವನಕ್ಕಾಗಿ, ಪ್ರಕೃತಿಗೆ ಭಾರ ಇಲ್ಲದೇ ಬದುಕುವ ಕಲೆಯನ್ನು ತಿಳಿಸಿಕೊಡುವ ಸಮ್ಮೇಳನ ಆಯೋಜನೆಯಾಗುತ್ತಿದೆ. ನೂರಾರು ಸಮಸ್ಯೆಗಳಿಗೆ ಉತ್ತರ ನೀಡುವ ಜೊತೆಗೆ ಉತ್ತರಗಳನ್ನು ಬೆಳೆಯುವಂತೆ ಮಾಡಲಿದೆ ಎಂದರು.
ಆಶಾ ಕಿಸಾನ್ ಸ್ವರಾಜ್’ನ ಕಪಿಲ್ ಶಾ, ಜನಪದ ಸೇವಾ ಟ್ರಸ್ಟ್‌ನ ಸಂತೋಷ್ ಕೌಲಗಿ, ಮಹಿಳಾ ಕಿಸಾನ್ ಅಧಿಕಾರ್ ಮಂಚ್‌ನ ರಾಜ್ಯ ಸಂಚಾಲಕರಾದ ಕವಿತಾ ಶ್ರೀನಿವಾಸನ್ ಇದ್ದರು.