ಮೈಸೂರು(Mysuru): ಹಾಲು ತರಲು ಅಂಗಡಿಗೆ ಹೋದ ಮಹಿಳೆಯನ್ನು ದುಷ್ಕರ್ಮಿಯೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದಲ್ಲಿ ಇಂದು ನಡೆದಿದೆ. ಮಿಣುಕಮ್ಮ(45 ವರ್ಷ) ಕೊಲೆಯಾದ ಮಹಿಳೆ. ಮದರಿ ಮಹಾದೇವನಾಯಕ ಕೊಲೆ ಮಾಡಿದ ಆರೋಪಿ ಎಂದು ತಿಳಿದುಬಂದಿದೆ.
ಹಾಲಿಗಾಗಿ ಬೆಳಗ್ಗೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಿಣುಕಮ್ಮಳನ್ನು ಹೊಂಚು ಹಾಕಿ ಕಾಯುತ್ತಿದ್ದ ಮಹಾದೇವನಾಯಕ ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ.
ಘಟನೆ ನೋಡಿ ಬೆಚ್ಚಿಬಿದ್ದ ಮಗನ ಕಿರುಚಾಟ ಕೇಳಿ ಆರೋಪಿ ಮಚ್ಚು ಎಸೆದು ಪರಾರಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕವಲಂದೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.














