ಮೈಸೂರು: ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ನಾಲ್ಕನೇ ಗ್ಯಾರಂಟಿ ಗೃಹ ಲಕ್ಷ್ಮೀ ಯೋಜನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬುಧವಾರ ಚಾಲನೆ ನೀಡಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ಯೋಜನೆಗೆ ಚಾಲನೆ ನೀಡಿದರು.
ಡಿಜಿಟಲ್ ಬಟನ್ ಒತ್ತುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಇದೇ ವೇಳೆ ರಾಹುಲ್ ಗಾಂಧಿಯವರು ಕಾಂಗ್ರೆಸ್ನ 100 ದಿನಗಳ ಯಶಸ್ವಿ ಪುಸ್ತಕ ಬಿಡುಗಡೆ ಮಾಡಿದರು.
ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ರಾಹುಲ್ ಗಾಂಧಿಯವರು, ಚುನಾವಣೆಯ ಮುಂಚೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಘೋಷಿಸಿತ್ತು. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಈಡೇರಿಸಿದೆ. ಇವತ್ತು ನಾವು ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಬಟನ್ ಒತ್ತುವ ಮೂಲಕ ಮನೆಯ ಯಜಮಾನಿಯ ಖಾತೆಗೆ ಹಣ ಸಂದಾನ ಆಗಿದೆ ಎಂದು ಹೇಳಿದರು.
ಪ್ರತಿ ತಿಂಗಳು 2 ಸಾವಿರ ಹಣ ಜಮೆ ಆಗಲಿದೆ. ಇದು ನಮ್ಮ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭರವಸೆ. ನಾವು ಹೇಳಿದಂತೆ ರಾಜ್ಯದ ಹೆಣ್ಣು ಮಕ್ಕಳು ಉಚಿತವಾಗಿ ಶಕ್ತಿ ಯೋಜನೆ ಜಾರಿಯಾಗಿದೆ. ಮಹಿಳೆಯರೀಗ ಉಚಿತವಾಗಿ ಸಂಚರಿಸುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಗ್ರಹ ಜ್ಯೋತಿಯಡಿ 200 ಯುನಿಟ್ ವಿದ್ಯುತ್ ನೀಡಲಾಗುತ್ತಿದೆ. ನಮ್ಮ ಐದು ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳು ಮಹಿಳೆಯರಿಗಾಗಿ ಮಾಡಿರುವ ಯೋಜನೆಗಳು ಎಂದು ತಿಳಿಸಿದರು.
ಕಾಂಗ್ರಸ್ ನ 5ರಲ್ಲಿ 4 ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಜಾರಿ ಮಾಡಿದ್ದೇವೆ. ಭಾರತ್ ಜೋಡೋ ಯಾತ್ರೆ ವೇಳೆ ನಾನು ಸಾವಿರಾರು ಮಹಿಳೆಯರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಈ ವೇಳೆ ನನಗೊಂದು ವಿಷಯ ಮನಸ್ಸಿಗೆ ತಾಕಿದೆ. ಬೆಲೆ ಏರಿಕೆ ಏಟು ನಮಗೆ ಬರೆ ಎಳೆದಿದೆ ಎಂದಿರಿ. ಇವತ್ತು ಪೆಟ್ರೋಲ್, ಟೀಸೆಲ್, ಅನಿಲ ಬೆಲೆ ಏರಿಕೆ ಬೀಳೋದು ಮಹಿಳೆಯರಿಗೆ. ಯಾವ ರೀತಿ ಬೇರು ಇಲ್ಲದೆ ಮರ ನಿಲ್ಲಲು ಸಾಧ್ಯವಿಲ್ಲವೋ ಅದೇ ರೀತಿ ಮಹಿಳೆಯರಿಲ್ಲದೆ ಕರ್ನಾಟಕ ನಿಲ್ಲಲು ಸಾಧ್ಯವಿಲ್ಲ. ಮಹಿಳೆಯರು ಬೇರು. ಬೇರುಗಳು ಯಾವ ರೀತಿ ಕಾಣುವುದಿಲ್ಲವೋ ಹಾಗೇ ಮಹಿಳೆಯರು ಕಾಣುತ್ತಿಲ್ಲ ಎಂದರು.
ಕರ್ನಾಟಕ ಇಡೀ ದೇಶಕ್ಕೆ ದಿಕ್ಸೂಚಿಯಾಗಿದೆ. ನಮ್ಮ ಗ್ಯಾರಂಟಿ ಘೋಷಣೆ ವೇಳೆ ಕೇಂದ್ರ ಸರ್ಕಾರ ಟೀಕೆ ಮಾಡಿತ್ತು. ಆದರೆ, ನಾವಿಂದು ನುಡಿದಂತೆ ನಡೆದಿದ್ದೇವೆ. ಕರ್ನಾಟಕರ ನಮ್ಮ ತಾಯಂದಿರು, ಅಕ್ಕ-ತಂಗಿಯರು ಉಚಿತವಾಗಿ ಕರ್ನಾಟಕ ಸುತ್ತಾಡುತ್ತಿದ್ದಾರೆ. ಉಚಿತ ವಿದ್ಯುತ್ ನೀಡಲಾಗಿದೆ, ಇಂದು ಒಂದು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಯಲ್ಲಿ ಎರಡು ಸಾವಿರ ಹಣ ಇದೆ. ಭಾರತ ದೇಶದ ಅತಿ ದೊಡ್ಡ ಹಣ ವರ್ಗಾವಣೆಯನ್ನು ನಮ್ಮ ಸರ್ಕಾರ ಮಾಡಿದೆ. 2 ಸಾವಿರ ಖಾತೆಗೆ ಹಣ ಹಾಗುವ ಯೋಜನೆ ಚಿಕ್ಕ ಯೋಜನೆ ಅಲ್ಲ. ಇದರಿಂದ ಮಹಿಳೆಯರು ಹಣ ಉಳಿತಾಯ ಮಾಡಬಹುದು, ಮಕ್ಕಳಿಗೆ ಪುಸ್ತಕ ಕೊಡಿಸಬಹುದು. ಇದರ ಸಂಪೂರ್ಣ ಉಪಯೋಗ ಮಹಿಳೆಯರ ಮೇಲಿದೆ.
ನಾವು ಮಾಡಲಾಗುವುದನ್ನು ಮಾತ್ರ ಹೇಳುತ್ತೇವೆ. ಈಡೇರಿಸಲಾಗದ ಮಾತುಗಳನ್ನು ಹೇಳುವುದಿಲ್ಲ. ಕಾಂಗ್ರೆಸ್ ಯೋಜನೆಗಳು ಮಹಿಳೆಯರ ಪರವಾದ ಯೋಜನೆಗಳಾಗಿವೆ. ಭಾರತ್ ಜೋಡೋ ಯಾತ್ರೆ ವೇಳೆ ಆಲಿಸಿದ ಮಹಿಳೆಯರ ಸಮಸ್ಯೆಯನ್ನೇ ನಾವೀಗ ಈಡೇರಿಸಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಮಹಿಳೆಯರಿಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದರು.
ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ರಾಹುಲ್ ಗಾಂಧಿ ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಿಸಿದ್ದು ಈಗಾಗಲೇ 4 ಗ್ಯಾರಂಟಿ ಘೋಷಣೆಯಾಗಿದೆ. ಒಂದು ಮಾತ್ರ ಬಾಕಿ ಇದೆ. ಯಾವ ಸರ್ಕಾರವೂ ಈ ರೀತಿಯ ಯೋಜನೆಗಳನ್ನು ಮಾಡಿಲ್ಲ. ಇಡೀ ಭಾರತದಲ್ಲಿ ಒಪ್ಪುವಂತಹ ಗ್ಯಾರಂಟಿಗಳಿವು. ಚುನಾವಣೆ ಮುಂಚೆ ನಾವು ಗ್ಯಾರಂಟಿ ಘೋಷಣೆ ಮಾಡಿದಾಗ, ಕೇಂದ್ರ ನಾಯಕರು ಟೀಕೆ ಮಾಡಿದ್ದರು. ಇದರಿಂದ ಆರ್ಥಿಕತೆ ಕುಸಿಯುತ್ತದೆ. ಇದು ಸುಳ್ಳು ಭರವಸೆ ಎಂದು ಹೇಳಿದ್ದರು. ಆದರೆ, ನಾವು ನುಡಿದಂತೆ ನಡೆದಿದ್ದೇವೆ. ಭರವಸೆಯನ್ನು ಈಡೇರಿಸಿದ್ದೇವೆಂದು ಎಂದರು.
ಇದೇ ವೇಳೆ ಕೇಂದ್ರದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, 50 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಆದರೆ, ನಾವು ವಿಮಾನ ನಿಲ್ದಾಣ, ಅನೇಕ ಸಂಸ್ಥೆಗಳನ್ನು ಮಾಡಿದ್ದೇವೆ. ನಾವು ಮಾಡಿದ ಕೆಲಸಗಳಲ್ಲಿ ಹುಡುಕಾಡಿ ಸುಟ್ಟ ಬಣ್ಣ ಬಳಿದು ತಮ್ಮದೆನ್ನುತ್ತಾರೆ. ನಮ್ಮ ಬಳಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬ ರಿಪೋರ್ಟ್ ಕಾರ್ಡ್ ಇದೆ. ನೆಹರು, ಇಂದಿರಾ ಗಾಂದಿ, ಸೋನಿಯಾ ಗಾಂದಿ ಮಾಡಿದ ಎಲ್ಲಾ ಕಾರ್ಯಗಳ ರಿಪೋರ್ಟ್ ನಮ್ಮ ಬಳಿ ಇದೆ. ಶೇ.14-ಶೇ. 74 ಜನರಿಗೆ ನಮ್ಮ ಸರ್ಕಾರದ ಸಮಯದಲ್ಲಿ ಶಿಕ್ಷಿತರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ವೆಂಕಟೇಶ್, ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ ಉಪಸ್ಥಿತರಿದ್ದಾರೆ.