ಮೈಸೂರು: ನಿವೃತ್ತ ಶಿಕ್ಷಕರೊಬ್ಬರನ್ನು ಕತ್ತು ಕೊಯ್ದು ಹತ್ಯೆಮಾಡಿರುವ ಘಟನೆ ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಂಜನಗೂಡು ಪಟ್ಟಣದ ನಿವಾಸಿ, ನಿವೃತ್ತ ಶಿಕ್ಷಕ ನಾಗರಾಜು (70) ಹತ್ಯೆಯಾದವರು.
ಇವರ ಶವ ಮೈಸೂರು ತಾಲೂಕಿನ ದೇವಲಾಪುರ ರಸ್ತೆಯ ಪಕ್ಕ ದಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ನಾಗರಾಜು ಮೂಲತಹ ಉಮ್ಮತ್ತೂರು ಗ್ರಾಮದವರಾಗಿದ್ದು, ನಂಜನಗೂಡು ಪಟ್ಟಣದಲ್ಲಿ ನೆಲೆಸಿದ್ದಾರೆ. ಎಂದಿನಂತೆ ಶನಿವಾರ ಗ್ರಾಮದಲ್ಲಿರುವ ಜಮೀನಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದರು. ಆದರೆ ರಾತ್ರಿಯಾದರೂ ವಾಪಸ್ಸಾಗದ ಕಾರಣ ಮನೆಯವರು ಮೊಬೈಲ್ ಗೆ ಕರೆ ಮಾಡಿದ್ದಾರೆ. ಆದರೆ ಸಂಪರ್ಕ ಸಾಧ್ಯಾವಾಗಿಲ್ಲ. ಮಳೆಯಿದ್ದ ಕಾರಣ ಊರಿನಲ್ಲೇ ಉಳಿದುಕೊಳಡಿರಬಹುದು ಎಂದು ಭಾವಿಸಿದ್ದರು.
ಆದರೆ, ಭಾನುವಾರ ಬೆಳಗ್ಗೆ ದೇವಲಾಪುರ ರಸ್ತೆ ಪಕ್ಕದಲ್ಲಿ ನಾಗರಾಜು ಅವರ ಶವ ಪತ್ತೆಯಾಗಿದೆ. ಕತ್ತಿಗೆ ಹಗ್ಗ ಬಿಗಿದು, ಕೊಯ್ದು ಅವರನ್ನು ಹತ್ಯೆ ಮಾಡಲಾಗಿದೆ. ರಸ್ತೆ ಬದಿ ಶವ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ವರುಣ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಚೇತನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಪರಿಶೀಲಿಸಿದ್ದಾರೆ. ಮೃತರ ವಾರಸುದಾರರು ಬಂದು ಖಚಿತಪಡಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಎಸ್ಪಿ ಸೀಮಾ ಲಾಟ್ಕರ್, ಎ.ಎಸ್.ಪಿ ಬಿ.ಎಂ ನಂದಿನಿ, ಸರ್ಕಲ್ ಇನ್ಸ್ ಪೆಕ್ಟರ್ ಪುರುಷೋತ್ತಮ್ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಬಂಧ ನಾಗರಾಜು ಅವರ ಪುತ್ರ ನೀಡಿದ ದೂರಿನನ್ವಯ ವರುಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.














