ಮನೆ ಅಪರಾಧ ಮೈಸೂರು:  ಒಂದೇ ನಿವೇಶನ ಮೂರ್ನಾಲ್ಕು ಜನರಿಗೆ ಮಾರಾಟ- ಮುಡಾದಿಂದ ಸ್ವಯಂಪ್ರೇರಿತ ದೂರು ದಾಖಲು

ಮೈಸೂರು:  ಒಂದೇ ನಿವೇಶನ ಮೂರ್ನಾಲ್ಕು ಜನರಿಗೆ ಮಾರಾಟ- ಮುಡಾದಿಂದ ಸ್ವಯಂಪ್ರೇರಿತ ದೂರು ದಾಖಲು

0

ಮೈಸೂರು: ಸಾರ್ವಜನಿಕರೊಬ್ಬರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಮಾಡಿ ಟೈಟಲ್ ಡೀಡ್ ನೀಡಿದ್ದು, ಅದೇ ನಿವೇಶನದ ಇಸಿ (ಹೊಣೆಗಾರಿಕೆ ಪತ್ರ) ದಾಖಲೆಯಲ್ಲಿ ಮತ್ತೊಬ್ಬನ ಹೆಸರು ಇರುವುದು ಮುಡಾ ಅದಾಲತ್ ನಲ್ಲಿ ಬೆಳಕಿಗೆ ಬಂದಿದೆ.

ಮುಡಾ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ವಿಚಾರಕ್ಕೆ ಬಹಿರಂಗವಾಗಿದ್ದು,  ಈ ಸಂಬಂಧ ಸ್ವಯಂ ಪ್ರೇರಿತವಾಗಿ ದೂರು ನೀಡಲು ಮುಡಾ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ಆಯುಕ್ತರಿಗೆ ಸೂಚನೆ ನೀಡಿದರು.

ಅದಾಲತ್’ನಲ್ಲಿ ಭಾಗವಹಿಸಿದ್ದ ವಿಜಯನಗರ ನಿವಾಸಿ ನಾಗರಾಜರಾವ್ ಅವರಿಗೆ 2005ರಲ್ಲಿ ಮುಡಾದಿಂದ ನಿವೇಶನ ಹಂಚಿಕೆಯಾಗಿದ್ದು, 2006ರಲ್ಲಿ ಟೈಟಲ್ ಡೀಡ್ ಕೂಡ ಪಡೆದು ಮನೆ ಕಟ್ಟಿ ವಾಸವಾಗಿದ್ದಾರೆ. ಈಗ ಬ್ಯಾಂಕಿನಲ್ಲಿಸಾಲ ಪಡೆಯಲು ನಿವೇಶನದ ಇಸಿಯನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿಪಡೆದಾಗ ಮತ್ತೊಬ್ಬರ ಹೆಸರು ಇರುವುದು ಕಂಡು ಬಂದಿದೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ತಕ್ಷಣ ಮನವಿಗೆ ಸ್ಪಂದಿಸಿದ ಮುಡಾ ಅಧ್ಯಕ್ಷರು, ಕೂಡಲೇ ಸಂಬಂಧ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಿಸಿ ಸಂಪೂರ್ಣ ವಿಚಾರಣೆ ನಡೆಸಲಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲಿ 46ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ಅದಾಲತ್ ಮುಂದೆ ತಂದು ಶೀಘ್ರವೇ ಪರಿಹರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿಮುಡಾ ಸದಸ್ಯ ಎಸ್ಬಿಎಂ ಮಂಜು, ಮುಡಾ ಆಯುಕ್ತ ದಿನೇಶ್ ಕುಮಾರ್ ಸೇರಿದಂತೆ ಮುಡಾ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.