ಮೈಸೂರು(Mysuru): ನಗರ ಸಾರಿಗೆ(ಆರ್ಟಿಒ) ಕಚೇರಿಯಲ್ಲಿ ಕಳೆದ ಎರಡು ದಿನಗಳಿಂದ ಸರ್ವರ್ ಡೌನ್ ಆದ ಕಾರಣ ವಾಹನ ಪರವಾನಗಿ ಪಡೆಯುವುದು ಸೇರಿದಂತೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ.
ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತವಿರುವ ಎಲ್ಲ ಆರ್ಟಿಒ ಕಚೇರಿಗಳಲ್ಲಿ ಸರ್ವರ್ ಡೌನ್ ಸಮಸ್ಯೆ ಉದ್ಭವವಾಗಿದೆ. ಇದರಿಂದಾಗಿ ವಾಹನ ಪರವಾನಗಿ ನವೀಕರಣ, ಹೊಸದಾಗಿ ಪರವಾನಗಿ ಪಡೆಯುವುದು, ಮಾಲೀಕತ್ವ ಬದಲಾವಣೆ, ನಿರಾಕ್ಷೇಪಣಾ ಪತ್ರ, ಎಲ್ಎಲ್ಆರ್ ಪಡೆಯುವುದೂ ಸೇರಿದಂತೆ ಸಾರಿಗೆ ಇಲಾಖೆಯಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ.
ಮಂಗಳವಾರ ಬೆಳಿಗ್ಗೆಯಿಂದಲೇ ಸರ್ವರ್ ಡೌನ್ ಸಮಸ್ಯೆ ಆರಂಭವಾಗಿದೆ. ಬುಧವಾರ ಬೆಳಿಗ್ಗೆ ಕೇವಲ ೧೦ ನಿಮಿಷ ಮಾತ್ರ ಸರ್ವರ್ ಸರಿಯಿತ್ತು. ಮತ್ತೆ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಸಂಜೆಯವರೆಗೂ ಸಾರ್ವಜನಿಕರ ಯಾವುದೇ ಕೆಲಸಗಳಾಗಿಲ್ಲ. ಇದರಿಂದ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.