ಮೈಸೂರು: ಗರ್ಭಿಣಿ ಪತ್ನಿಯನ್ನು ಪತಿಯೇ ಹತ್ಯೆ ಮಾಡಿರುವ ಘಟನೆ ನಂಜನಗೂಡು ಸಮೀಪದ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ.
ಶೋಭಾ (26) ಮೃತ ದುರ್ದೈವಿ. ಮಂಜು (27) ಅಲಿಯಾಸ್ ಮಂಜುನಾಥ್ ಹೆಂಡತಿಯನ್ನು ಕೊಲೆಗೈದ ಪಾಪಿ ಪತಿ.
8 ವರ್ಷಗಳ ಹಿಂದೆ ಶೋಭಾ, ಮಂಜು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರಿಗೆ ಐದು ವರ್ಷದ ಗಂಡು ಮಗುವಿದ್ದು, ಈಗ ತುಂಬು ಗರ್ಭಿಣಿಯಾಗಿದ್ದಳು. ಹೆರಿಗೆಯ ಆರೈಕೆಗಾಗಿ ತವರು ಮನೆಗೆ ಬಂದಿದ್ದಳು. ಕುಡಿದ ಮತ್ತಲ್ಲಿ ತವರು ಮನೆಯಿಂದ ಗಂಡನ ಮನೆಗೆ ಪತ್ನಿ ಬರುತ್ತಿಲ್ಲವೆಂದು ಜಗಳ ತೆಗೆದ ಪತಿ ಬ್ಲೇಡ್ ನಿಂದ ಕುತ್ತಿಗೆ ಕೊಯ್ದಿದ್ದಾನೆ.
ತಕ್ಷಣ ಶೋಭಾರನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ತುಂಬು ಗರ್ಭಿಣಿ ಶೋಭಾ ಸಾವನ್ನಪ್ಪಿದ್ದಾಳೆ.
ಆರೋಪಿ ಮಂಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube