ಮೈಸೂರು: ಶಸ್ತ್ರ ಚಿಕಿತ್ಸೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೆ.ಆರ್. ಆಸ್ಪತ್ರೆ ವೈದ್ಯನಿಗೆ 4 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ 3ನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.
ಪ್ರಕರಣದ ದೂರುದಾರ ಎಸ್.ಆರ್ ದೇವರಾಜು ಅವರ ಸಂಬಂಧಿಯೊಬ್ಬರು ಶಸ್ತ್ರ ಚಿಕಿತ್ಸೆಗಾಗಿ ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಶಸ್ತ್ರಚಿಕಿತ್ಸೆ ಮಾಡಲು ಕೆ.ಆರ್. ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಡಾ. ಪುಟ್ಟಸ್ವಾಮಿ, 40 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅದರಂತೆ 2017ರ ಏಪ್ರಿಲ್ 12ರಂದು 26 ಸಾವಿರ ರೂ. ಲಂಚದ ಹಣ ಪಡೆಯುವಾಗ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದರು.
ಈ ಕುರಿತ ಪ್ರಕರಣದ ಎಸಿಬಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಪ್ರಕರಣದ ತನಿಖಾಧಿಕಾರಿ ಶೇಖರ್ ಅವರು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ವೇಳೆ ಆರೋಪಿ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ 3ನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯ ಅವರು ಆರೋಪಿತರಿಗೆ 4 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.