ಮೈಸೂರು: ಫೇಸ್ ಬುಕ್’ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಯುವತಿಯ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನರಸಿಂಹ ರಾಜ ಮೊಹಲ್ಲಾದ 21 ವರ್ಷದ ಯುವತಿ ಸ್ಕೂಟಿ ಕಳೆದುಕೊಂಡವರು.
ಪ್ರಕರಣದ ವಿವರ:
ಡಿಸೆಂಬರ್ 19 ರಂದು ರೋಹಿತ್ ಸಿಜೂರ್ ಎಂಬ ಫೇಸ್ ಬುಕ್ ಅಕೌಂಟ್’ನಿಂದ ಯುವತಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಯುವತಿ ಈ ಫ್ರೆಂಡ್ ರಿಕ್ವೆಸ್ಟ್’ನ್ನು ಸ್ವೀಕರಿಸಿದ್ದಾರೆ. ಬಳಿಕ ಯುವತಿಯೊಂದಿಗೆ ಆತ ಸಂಭಾಷಣೆ ನಡೆಸಿದ್ದಾನೆ.
ಡಿಸೆಂಬರ್ 30ರಂದು ಪಡುವರಹಳ್ಳಿಯ ಸರ್ಕಲ್ ಬಳಿ ಕರೆಸಿಕೊಂಡು ಸ್ವಲ್ಪ ಸಮಯ ಮಾತನಾಡಿ, ಬಳಿಕ ನನ್ನ ಬೈಕನ್ನು ಸರ್ವೀಸ್ ಗೆ ಕೊಟ್ಟಿದ್ದೇನೆ. ತನ್ನನ್ನು ಮಣಿಪಾಲ್ ಜಂಕ್ಷನ್ ಬಳಿ ಇರುವ ಬೈಕ್ ಶೋ ರೂಂ ಬಳಿ ಬಿಡುವಂತೆ ಕೇಳಿಕೊಂಡಿದ್ದಾನೆ.
ಈ ಸಂದರ್ಭದಲ್ಲಿ ಯುವಕನೇ ಯುವತಿಯ ಸ್ಕೂಟಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಬಳಿಕ ಮಣಿಪಾಲ್ ಜಂಕ್ಷನ್ ಬಳಿ ಸ್ಕೂಟರನ್ನು ನಿಲ್ಲಿಸಿ, ನಿನ್ನ ಜೊತೆ ಮಾತನಾಡಬೇಕೆಂದು ಯುವತಿಯನ್ನು ಸ್ಕೂಟಿಯಿಂದ ಕೆಳಗೆ ಇಳಿಸಿದ್ದಾನೆ. ತಕ್ಷಣ ಯುವಕ ಸ್ಕೂಟರನ್ನು ವೇಗವಾಗಿ ಚಲಾಯಿಸಿ ಯುವಕ ಪರಾರಿಯಾಗಿದ್ದಾನೆ ಎಂದು ಯುವತಿ ತಿಳಿಸಿದ್ದಾಳೆ.
ಈ ಸಂಬಂಧ ಎನ್ ಆರ್ ಪೋಲಿಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.