ಮೈಸೂರು(Mysuru): ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿಯಲ್ಲಿ ಬಾಲಕ ಮತ್ತು ವೃದ್ಧೆಯನ್ನು ಬಲಿ ಪಡೆದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.
ಚಿರತೆ ಬಲಿ ಪಡೆದ ಪ್ರದೇಶಗಳಲ್ಲಿ ಸುಮಾರು 19 ಬೋನ್’ಗಳನ್ನು ಇರಿಸಲಾಗಿತ್ತು. ಜೊತೆಗೆ ಇಪತ್ತಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿತ್ತು. ಥರ್ಮಲ್ ಡ್ರೋನ್ ಕ್ಯಾಮೆರಾ ಬಳಸಿ ಚಿರತೆ ಅಡಗು ತಾಣ ಪತ್ತೆ ಹಚ್ವಿದ್ದ ಇಲಾಖೆ, ಆ ಸ್ಥಳದಲ್ಲಿ ತುಮಕೂರಿನಿಂದ ತರಿಸಿದ್ದ ದೊಡ್ಡ ಬೋನ್ ಅಳವಡಿಸಲಾಗಿತ್ತು. ಬುಧವಾರ ರಾತ್ರಿ ಬೋನ್ ನಲ್ಲಿ ಹೊರಳಹಳ್ಳಿ ಬಳಿ ಚಿರತೆ ಸೆರೆ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜ.20 ರಂದು ಕನ್ನಾಯಕನಹಳ್ಳಿಯಲ್ಲಿ ವೃದ್ಧೆಯನ್ನು ಬಲಿ ಪಡೆದಿದ್ದ ಚಿರತೆ ಮರುದಿನ ಸಂಜೆ ಹೊರಳಹಳ್ಳಿ ಬಳಿ ಬಾಲಕನ ಮೇಲೆ ದಾಳಿ ಮಾಡಿ ಕೊಂದಿದ್ದಲ್ಲದೇ, ಅರ್ಧ ದೇಹವನ್ನು ತಿಂದಿತ್ತು.
ಘಟನೆಯನ್ನು ಗಂಭಿರವಾಗಿ ಪರಿಗಣಿಸಿದ್ದ ಸರ್ಕಾರ ಚಿರತೆ ಕಂಡಲ್ಲಿ ಗುಂಡಿಕ್ಕಿ ಸಾಯಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿತ್ತು.
ಈ ಬೆನ್ನಲ್ಲೇ ಬುಧವಾರ ಸೆರೆ ಸಿಕ್ಕ ಚಿರತೆ ನೋಡಲು ಜನಜಂಗುಳಿಯೇ ಸೇರಿತ್ತು. ಅರಣ್ಯ ಅಧಿಕಾರಿಗಳು ಚಿರತೆಯನ್ನು ಬೇರೆಡೆ ಸಾಗಿಸಲು ಪ್ರಯತ್ನ ಪಟ್ಟಾಗ ಗ್ರಾಮಸ್ಥರು ತಡೆದು ಚಿರತೆಯನ್ನು ಸ್ಥಳದಲ್ಲೇ ಕೊಲ್ಲುವಂತೆ ಒತ್ತಾಯಿಸಿ ಚಿರತೆ ವಾಹನವನ್ನು ಸುತ್ತುವರೆದು ಅಡ್ಡ ಮಲಗಿ ಪ್ರತಿಭಟಿಸಿದರು.
ಈ ವೇಳೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಸೆರೆಸಿಕ್ಕ ಚಿರತೆಯನ್ನು ಕೊಲ್ಲಲಾಗುವುದಿಲ್ಲ. ಬೇರೆಡೆ ಸಾಗಿಸಲು ಅವಕಾಶ ನೀಡುವಂತೆ ಉಪವಿಭಾಗಾಧಿಕಾರಿ ಕಮಲಬಾಯಿ ಸಾರ್ವಜನಿಕರಲ್ಲಿ ಮನವಿ ಮಾಡಿದ ನಂತರ ಗ್ರಾಮಸ್ಥರು ಒಪ್ಪಿದರು.
ಡಿಸಿಎಫ್ ಬಸವರಾಜು, ಮಹೇಶ್ ಕುಮಾರ್, ಎಸಿಎಫ್ ಲಕ್ಷೀಕಾಂತ್, ಎಎಸ್ಪಿ ಡಾ.ನಂದಿನಿ, ಡಿವೈಎಸ್ಪಿ ಗೋವಿಂದರಾಜು, ಸಿಪಿಐ ಆನಂದ್, ಲೋಲಾಕ್ಷಿ, ಪಿಎಸ್ಐ ತಿರುಮಲ್ಲೇಶ್ ಇತರರು ಹಾಜರಿದ್ದರು.