ಮನೆ ಕಾನೂನು ಮೈಸೂರು ವಿವಿ ಕುಲಪತಿ ನೇಮಕ ಆದೇಶ: ತಡೆಯಾಜ್ಞೆ ತೆರವು ಮಾಡಲು ನಿರಾಕರಿಸಿದ ಹೈಕೋರ್ಟ್‌

ಮೈಸೂರು ವಿವಿ ಕುಲಪತಿ ನೇಮಕ ಆದೇಶ: ತಡೆಯಾಜ್ಞೆ ತೆರವು ಮಾಡಲು ನಿರಾಕರಿಸಿದ ಹೈಕೋರ್ಟ್‌

0

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಪ್ರೊ. ಎನ್ ಕೆ ಲೋಕನಾಥ್ ಅವರನ್ನು ನೇಮಕ ಮಾಡಿ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದ್ದು,  ಅಂತಿಮವಾಗಿ ವಿಚಾರಣೆ ನಡೆಸಿ, ಅರ್ಜಿ ಇತ್ಯರ್ಥಪಡಿಸುವುದಾಗಿ ತಿಳಿಸಿದೆ.

Join Our Whatsapp Group

ಲೋಕನಾಥ್ ಅವರನ್ನು ಕುಲಪತಿಯಾಗಿ ನೇಮಕ ಮಾಡಿ 2023ರ ಮಾರ್ಚ್‌ 23ರಂದು ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ಪ್ರೊ.ಶರತ್ ಅನಂತಮೂರ್ತಿ ಸಲ್ಲಿಸಿದ್ದ ಅರ್ಜಿಯ ಭಾಗವಾಗಿ ಲೋಕನಾಥ್‌ ಅವರ ಪರವಾಗಿ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಪ್ರೊ. ಎನ್ ಕೆ ಲೋಕನಾಥ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು ಕಳೆದ ಮೂರು ತಿಂಗಳಿಂದ ಲೋಕನಾಥ್ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಕುಲಪತಿ ನೇಮಕಾತಿ ಆದೇಶಕ್ಕೆ ತಡೆ ನೀಡಿ ಜೂನ್‌ 21ರಂದು ಹೊರಡಿಸಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಬೇಕು. ತಡೆಯಾಜ್ಞೆಯಾಗಿರುವುದರಿಂದ ಆಡಳಿತಾತ್ಮಕವಾಗಿ ಸಾಕಷ್ಟು ಸಮಸ್ಯೆ ಉದ್ಭವಿಸಿವೆ ಎಂದರು. ಇದಕ್ಕೆ ರಾಜ್ಯಪಾಲರನ್ನು ಪ್ರತಿನಿಧಿಸಿರುವ ವಕೀಲ ಸಂತೋಷ್‌ ನಗರ್ಲೆ ಅವರು ಧ್ವನಿಗೂಡಿಸಿದರು.

ಶರತ್‌ ಅನಂತಮೂರ್ತಿ ಅವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ವಿಚಾರಣೆ ಪೂರ್ಣಗೊಳ್ಳುವವರೆಗೆ ತಡೆಯಾಜ್ಞೆ ತೆರವುಗೊಳಿಸಬಾರದು ಎಂದು ವಾದಿಸಿದರು.

ಆಗ ಪೀಠವು ಜುಲೈ 13ರಂದು ಅಂತಿಮ ವಿಚಾರಣೆ ನಡೆಸಿ, ಆದೇಶ ಪ್ರಕಟಿಸಲಾಗುವುದು ಎಂದು ವಿಚಾರಣೆ ಮುಂದೂಡಿತು.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯಿದೆ ಅನ್ವಯ ನಿರ್ದಿಷ್ಟ ಅರ್ಹತೆ ಇಲ್ಲದಿದ್ದರೂ ನಿಯಮಾವಳಿ ಉಲ್ಲಂಘಿಸಿ, ಕುಲಪತಿಯನ್ನು ನೇಮಕ ಮಾಡಲಾಗಿದೆ. ಕುಲಪತಿಯಾಗಿ ನೇಮಕಗೊಂಡಿರುವ ಲೋಕನಾಥ್ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ. ಆದರೆ, ಆ ವಿಷಯವನ್ನು ಅವರು ಮರೆಮಾಚಿದ್ದಾರೆ. ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ನಿಯಮಗಳನ್ನು ಗಾಳಿಗೆ ತೂರಿ ಲೋಕನಾಥ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಕುಲಪತಿ ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಲೋಕನಾಥ್ ಅವರ ನೇಮಕಾತಿ ಆದೇಶದ ಕಾರ್ಯಾಕಾರಿತ್ವ ಹಾಗೂ ಅನುಷ್ಠಾನಕ್ಕೆ ತಡೆ ನೀಡಬೇಕು ಎಂದು ಕೋರಿದ್ದಾರೆ. ಅರ್ಜಿಯನ್ನು ಜೂನ್‌ 21ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಕುಲಪತಿ ನೇಮಕಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.