ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗವು ಲಿಂಗ ಸಮಾನತೆಗಾಗಿ ಮಾ.1 ರಿಂದ 8 ರವರೆಗೆ ‘ಡಿಜಿಟ್-ಆಲ್ – ಆವಿಷ್ಕಾರ ಮತ್ತು ತಂತ್ರಜ್ಞಾನ’ ವಿಷಯದಲ್ಲಿ ಮಹಿಳಾ ದಿನವನ್ನು ಆಚರಿಸುತ್ತಿದೆ.
ಈ ವಾರದ ಅವಧಿಯ ಆಚರಣೆಯು ಸೈಕಲ್ ಜಾಥ, NIRAMAI (ಕೃತಕ ಬುದ್ಧಿಮತ್ತೆ ಸಂಪರ್ಕವಿಲ್ಲದ, ವಿಕಿರಣ-ಮುಕ್ತ ಸ್ತನ ಆರೋಗ್ಯ ತಪಾಸಣೆ ಮತ್ತು ಪರಿಹಾರ) ಸಂಸ್ಥೆಯ ವತಿಯಿಂದ ಒಂದು ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ, ರಸಪ್ರಶ್ನೆ ಸ್ಪರ್ಧೆ, ಆಟಗಳು ಮತ್ತು ಇತರೆ ಮೌಲ್ಯಾಧಾರಿತ ಕಾರ್ಯಕ್ರಮಗಳ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಒಂದು ವಾರದ ಸಂಭ್ರಮಾಚರಣೆಗೆ ಮಾ. 1 ರಂದು ನಡೆದ ಸೈಕಲ್ ಜಾಥಾದೊಂದಿಗೆ ಚಾಲನೆ ನೀಡಲಾಯಿತು. ಅದರಲ್ಲಿ ಮೈಸೂರು ವಿಭಾಗದ ಸುಮಾರು 50 ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಮತ್ತು ಇತರ ಸಿಬ್ಬಂದಿಗಳು ಯಾದವಗಿರಿಯ ಚಾಮುಂಡಿ ಕ್ಲಬ್‌ನಿಂದ ಪ್ರಾರಂಭವಾಗಿ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯವರೆಗೆ ಬೈಸಿಕಲ್ ಜಾಥಾದಲ್ಲಿ ತೆರಳಿ ಭಾಗವಹಿಸಿದರು.
ವಾರದ ಆಚರಣೆಯ ಪ್ರಮುಖ ಅಂಶವೆಂದರೆ ಮೈಸೂರು ವಿಭಾಗದ ಮಹಿಳಾ ಉದ್ಯೋಗಿಗಳಿಗೆ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು NIRAMAI (ಕೃತಕ ಬುದ್ಧಿಮತ್ತೆಯ ವಿಕಿರಣ ಮುಕ್ತ, ಸಂಪರ್ಕವಿಲ್ಲದ ಸ್ತನ ಆರೋಗ್ಯ ತಪಾಸಣೆ ಪರಿಹಾರ) ಆಯೋಜಿಸಿದೆ. ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿ ಆವರಣದಲ್ಲಿ ಇಂದಿನಿಂದ ಆರಂಭವಾದ 3 ದಿನಗಳ ಶಿಬಿರವನ್ನು ಮೈಸೂರು ವಿಭಾಗದ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಪೂಜಾ ಅಗರ್ವಾಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೈಋತ್ಯ ರೈಲ್ವೆಯ ಮಹಿಳೆಯರ ಕಲ್ಯಾಣ ಸಂಸ್ಥೆ (SWRWWO)ಯು ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದ ಭಾಗವಾಗಿರಲು ಹೆಮ್ಮೆಪಡುತ್ತದೆ ಮತ್ತು ಎಲ್ಲಾ ಮಹಿಳಾ ಉದ್ಯೋಗಿಗಳನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ ಹಾಗು ಈ ಆಚರಣೆಯು ಸಮಾಜದಲ್ಲಿ ಮಹಿಳೆಯರ ಹಲವಾರು ಸಾಧನೆಗಳನ್ನು ಆಚರಿಸಲು ಒಂದು ಅವಕಾಶವಾಗಲಿ ಎಂದು ಆಶಿಸುತ್ತದೆ ಎಂದು ಹೇಳಿದರು.
ಮಹಿಳಾ ದಿನಾಚರಣೆಯ ಈ ವಾರದ ಆಚರಣೆಯು ಮಹಿಳೆಯರಲ್ಲಿ ಆತ್ಮಸ್ಥೈರ್ಯ, ಧೈರ್ಯ ಮತ್ತು ಶಕ್ತಿಯ ಭಾವವನ್ನು ತುಂಬಲು ಸಹಾಯ ಮಾಡುತ್ತದೆ ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಗಾಗಿ ಶ್ರಮಿಸಲು ಪ್ರೋತ್ಸಾಹಿಸುತ್ತದೆ ಎಂದು ಸಂಸ್ಥೆಯು ವಿಶ್ವಾಸ ಹೊಂದಿದೆ ಎಂದು ತಿಳಿಸಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ನಂತರ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ವತಿಯಿಂದ ಸುಮಾರು 25 ಮಹಿಳಾ ಸ್ವಚ್ಛತಾ ಸಿಬ್ಬಂದಿಗಳನ್ನು ಅವರುಗಳು ಮಾಡಿರುವ ಅನುಕರಣೀಯ ಕಾರ್ಯಕ್ಕಾಗಿ ಸನ್ಮಾನಿಸಲಾಯಿತು.
ಮಾರ್ಚ್ 8 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಉಪನ್ಯಾಸಕರ ಭಾಷಣ, ರಸಪ್ರಶ್ನೆ ಸ್ಪರ್ಧೆ ಹಾಗು ಇತರೆ ಆಟಗಳು-ಚಟುವಟಿಕೆಗಳ ವಿಜೇತರಿಗೆ ಪ್ರಶಸ್ತಿ, ಪ್ರಮಾಣಪತ್ರಗಳ ವಿತರಣೆ ಒಳಗೊಂಡಿರುತ್ತದೆ.