ಮನೆ ರಾಜ್ಯ ಮೈಸೂರು: ಕೈಗಾರಿಕೆಗೆ ಜಮೀನು ಪಡೆದು ಉದ್ಯೋಗ ನೀಡದ್ದಕ್ಕೆ ಯುವಕ ಆತ್ಮಹತ್ಯೆ

ಮೈಸೂರು: ಕೈಗಾರಿಕೆಗೆ ಜಮೀನು ಪಡೆದು ಉದ್ಯೋಗ ನೀಡದ್ದಕ್ಕೆ ಯುವಕ ಆತ್ಮಹತ್ಯೆ

0

ಮೈಸೂರು: ಕೈಗಾರಿಕೆಗಾಗಿ ಜಮೀನು ಪಡೆದು ಉದ್ಯೋಗ ನೀಡದ ಕಾರಣ ಬೇಸರಗೊಂಡು ಯುವ ರೈತನೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡಿನ ಅಡಕನಹಳ್ಳಿ ಗ್ರಾಮದ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡವರು.

ಕೆಐಎಡಿಬಿ ವತಿಯಿಂದ ಕೈಗಾರೀಕರಣಕ್ಕೆ ರೈತರ ಭೂಮಿಯನ್ನು ತೆಗೆದುಕೊಂಡು ಅಡಕನಹಳ್ಳಿ, ತಾಂಡ್ಯ, ಕಡಕೋಳ, ತಾಂಡವಪುರ ಹಾಗೂ ಹಿಮಾವು ಗ್ರಾಮಗಳನ್ನು ಒಳಗೊಂಡಂತೆ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲಾಗಿದೆ. ಕೈಗಾರಿಕೀಕರಣಕ್ಕೆ ವಶಪಡಿಸಿಕೊಂಡಿರುವ ಭೂಮಿಯ ರೈತರ ಮಕ್ಕಳಿಗೆ ಅವರ ವಿದ್ಯೆಗೆ ತಕ್ಕಂತೆ ಕೆಲಸ ಕೊಡಬೇಕು. ಅಂತೆಯೇ ಸಿದ್ದರಾಜು ಅವರ ಭೂಮಿಯನ್ನೂ ಕೈಗಾರಿಕೆಗಾಗಿ ವಶಪಡಿಸಿಕೊಳ್ಳಲಾಗಿತ್ತು. ಆದರೆ ಅವರಿಗೆ ಉದ್ಯೋಗ ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕೈಗಾರಿಕೆಗಾಗಿ ನಮ್ಮ ಯಜಮಾನರ ಜಮೀನನ್ನು ಖಾಸಗಿ ಸಂಸ್ಥೆ ವಶಕ್ಕೆ ಪಡೆದಿದೆ. ನಾಲ್ಕು ವರ್ಷಗಳಿಂದ ಉದ್ಯೋಗಕ್ಕಾಗಿ ನಮ್ಮ ಯಜಮಾನರು ಮನವಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕೆಐಎಡಿಬಿ ಅಧಿಕಾರಿಗಳು ಆದೇಶ ಮಾಡಿದರೂ ಕೂಡ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿ ಖಾಯಂ ಕೆಲಸ ಕೊಡುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಉದ್ಯೋಗ ಸಿಗದೇ ಪತಿ ನೊಂದು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.

ಸಿದ್ದರಾಜು ಡೆತ್​ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಜಮೀನು ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ ಉದ್ಯೋಗ ನೀಡಿಲ್ಲ. ಉದ್ಯೋಗಕ್ಕಾಗಿ ಸುತ್ತಿ ಸುತ್ತಿ ಸಾಕಾಗಿದೆ. ನನ್ನ ಹಾಗೂ ನನ್ನ ಕುಟುಂಬಸ್ಥರ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಕಾರಣರಾದ ಸಂಸ್ಥೆ ಮತ್ತು ಅದರ ಇಲ್ಲಿನ ಘಟಕದ ಮುಖ್ಯಸ್ಥ ಹಾಗೂ ಹೆಚ್ ​ಆರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಡೆತ್ ​ನೋಟ್​ ನಲ್ಲಿ ಬರೆದಿದ್ದಾರೆ.

ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರಲಾಗಿದೆ.

ಹಿಂದಿನ ಲೇಖನದ್ವಿಚಕ್ರ ವಾಹನಗಳ ಮುಖಾಮುಖಿ ಢಿಕ್ಕಿ: ಮೂವರ ಸ್ಥಿತಿ ಗಂಭೀರ
ಮುಂದಿನ ಲೇಖನಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ: ಬಿ ವೈ ವಿಜಯೇಂದ್ರ