ಮನೆ ಸ್ಥಳೀಯ ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

0

ಮೈಸೂರು:  ಕರ್ನಾಟಕ ಸಂಗೀತ ಇಡೀ ದೇಶದಾದ್ಯಂತ ಮನೆ ಮಾತಾಗಿದ್ದು, ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರವಾದುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನುಡಿದರು.

Join Our Whatsapp Group

ಕೇಂದ್ರ ಪ್ರವಾಸೋಧ್ಯಮ ಇಲಾಖೆ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಆಯೋಜಿಸಿದ್ದ ಮೈಸೂರು ಸಂಗೀತ ಸುಗಂಧ ಉತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. 3 ದಿನಗಳ ಕಾಲ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋಧ್ಯಮ ಸಚಿವ ಸುರೇಶ್ ಗೋಪಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ , ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಶಾಸಕ ಶ್ರೀವತ್ಸ ಭಾಗಿಯಾಗಿದ್ದರು.

ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ  ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಅಪಾರ ಸಂತಸ ತಂದಿದೆ. ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರವಾದುದು. ದೇಶ ಆರ್ಥಿಕವಾಗಿ ಸದೃಢವಾದರೆ ಇಡೀ ದೇಶ ಎಲ್ಲಾ ರಂಗಗಳಲ್ಲೂ ಸದೃಢವಾಗುತ್ತದೆ. ಕರ್ನಾಟಕ ಸಂಗೀತ ಇಡೀ ದೇಶದಾದ್ಯಂತ ಮನೆ ಮಾತಾಗಿದೆ. ಏಕ್ ಭಾರತ್ ಶ್ರೇಷ್ಟ ಭಾರತ್ ಸಾಕಾರಗೊಳ್ಳಲು ಸಂಗೀತ‌ ಪ್ರೇರಣೆಯಾಗಿದೆ. ವಿಭಿನ್ನವಾದ ಭಾಷೆ ಸಂಸ್ಕೃತಿ ಹೊಂದಿದ್ದರೂ ದೇಶ ವಿವಿಧತೆಯಲ್ಲಿ ಏಕತೆಯಿಂದ ಕೂಡಿದೆ. ಕನ್ನಡ ಭಾಷೆ ಭಕ್ತಿ ಸಂಗೀತದ ಮೂಲಕ ಮನ ಮುಟ್ಟುತ್ತದೆ. ಹಲವು ವಿಶೇಷತೆಗಳನ್ನು ಹೊಂದಿರುವ ಮೈಸೂರು ದಾಸ ಸಂಗೀತ ಪರಂಪರೆಯನ್ನು ಹೊಂದಿದೆ. ಪುರಂದರದಾಸರು ಕೀರ್ತನೆಗಳ ಮೂಲಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅತ್ಯಮೂಲ್ಯ. ಇದರ ಜೊತೆಗೆ ಕನಕದಾಸ, ವಾದಿರಾಜ ದಾಸ ಮೊದಲಾದವರು ಸಂಗೀತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಮೂಲ ಮೈಸೂರು ಆಗಿದೆ. ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರಾಗಿದ್ದಾರೆ ಎಂದು ಶ್ಲಾಘಿಸಿದರು.

ಹಾಗೆಯೇ ಪುರಂದರದಾಸರ ರಾಗಿ ತನ್ನಿರಿ ಭಿಕ್ಷೆಕೆ ರಾಗಿ ತನ್ನಿರಿ, ಭೋಗ್ಯರಾಗಿ, ಯೋಗ್ಯರಾಗಿ, ಭಾಗ್ಯವಂತರಾಗಿ, ನೀವು ಭಿಕ್ಷಕೆ ರಾಗಿ ತನ್ನಿರಿ ಎಂಬ ಜನಪ್ರಿಯ ಕೀರ್ತನೆಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಡಿದರು.

ಮೈಸೂರು ಸಂಗೀತದ ವಾತಾವರಣ- ಸಂಸದ ಯದುವೀರ್

ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು-ಕೊಡಗು ಸಂಸದ ಯದುವೀರ್, ಮೈಸೂರಿನಲ್ಲಿ ಸಂಗೀತ ಸುಗಂಧ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇದು ನಾವೆಲ್ಲರೂ ಖುಷಿ ಪಡುವ ವಿಚಾರ. ಈ ಕಾರ್ಯಕ್ರಮ ಇಲ್ಲಿಯೇ ಆಯೋಜನೆ ಮಾಡಿದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರಿಗೆ ಧನ್ಯವಾದ ತಿಳಿಸೋಣ ಎಂದರು.

ಮೈಸೂರು ಸಂಗೀತದ ವಾತಾವರಣ. ಅದರಲ್ಲೂ ಶಾಸ್ತ್ರೀಯ ಸಂಗೀತ ರಾಜಮನೆತನದಿಂದಲೂ ಇದೆ. ಸಂಗೀತ ಪ್ರಾರಂಭ ಮಾಡಿದ್ದೇ ಪುರಂದರ ದಾಸರು. ಸಂಗೀತಕ್ಕೆ ಕೊಡುಗೆ ಕೊಟ್ಟಿದ್ದು ಪುರಂದರ ದಾಸರು. ಪುರಂದರ ದಾಸರ ಬಳಿಕ ಎಲ್ಲಾ ದಾಸರಿಗೂ ಧನ್ಯವಾದ ತಿಳಿಸಬೇಕಿದೆ. ಹೀಗೆಯೇ ಸಂಗೀತ ಮುಂದುವರೆಯಲಿ ಎಂದು ಯದುವೀರ್ ತಿಳಿಸಿದರು.

ಧರ್ಮ ಜಾತಿ ಮೀರಿದ ಮನಸ್ಸುಗಳ ಒಗ್ಗೂಡುವಿಕೆಗೆ ಈ ಕಾರ್ಯಕ್ರಮ- ಸಚಿವ ಹೆಚ್.ಸಿ ಮಹದೇವಪ್ಪ

ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, ಮೈಸೂರು ಸಂಗೀತ ಸುಗಂಧ ಉತ್ಸವ ಇದೊಂದು ಅವಿಸ್ಮರಣೀಯ ದಿನ. ಧರ್ಮ ಜಾತಿ ಮೀರಿದ ಮನಸ್ಸುಗಳನ್ನ ಒಗ್ಗೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಕಾಲದಲ್ಲಿ ಸಂಗೀತ ಮನ್ನಣೆ ಪಡೆಯಿತು. ಕರ್ನಾಟಕದಲ್ಲಿ ಪುರಂದರ ದಾಸರು ಕೀರ್ತನೆಗಳ ಮೂಲಕ ಸಂಗೀತವನ್ನ ಪಸರಿಸಿದರು. 414ನೇ ದಸರಾವನ್ನ ಜನ ಮೆಚ್ಚಿದ್ದಾರೆ. ಈ ದಸರಾದಲ್ಲಿ ಸಂಗೀತದ ಜೊತೆ ಪ್ರತಿಯೊಂದಕ್ಕೂ ಮನ್ನಣೆ ನೀಡಿದ್ದೇವೆ. ಗಣತಂತ್ರ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವವನ್ನ ಗೌರವಿಸುವ ಮೂಲಕ ಸಂವಿಧಾನದ ಆಶಯಗಳನ್ನ ಎತ್ತಿ ಹಿಡಿಯೋಣ ಎಂದು ಹೇಳಿದರು.

ಸಂಗೀತ ಸುಗಂಧ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬ ವೇದಿಕೆಯತ್ತ ದಿಢೀರನೇ ಆಗಮಿಸಿದ ಘಟನೆ ನಡೆಯಿತು.  ವೇದಿಕೆಗೆ ಆಗಮಿಸಿದ ವ್ಯಕ್ತಿ, ಕರ್ನಾಟಕವನ್ನು ಲೂಟಿ ಹೊಡೆಯುತ್ತಿದ್ದಾರೆ ರಕ್ಷಣೆ ಮಾಡಿ ಎಂದು ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಮನವಿ ಮಾಡಿದನು.

ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಕೇಂದ್ರ ಸಚಿವರ ಬಳಿ ಮನವಿ ಮಾಡುತ್ತಿದ್ದ ವ್ಯಕ್ತಿಯನ್ನು ಕರೆದೊಯ್ದರು. ಹಠಾತ್ ನಡೆದ ಘಟನೆಯಿಂದ ವೇದಿಕೆ ಮೇಲಿದ್ದ ಗಣ್ಯರು ತಬ್ಬಿಬ್ಬಾದರು. ಪೊಲೀಸರು ಕರೆದೊಯ್ಯುತ್ತಿದ್ದ ವ್ಯಕ್ತಿಯನ್ನು ಬಿಟ್ಟುಬಿಡಿ ಎಂದು ಕೇಂದ್ರ ಸಚಿವೆ ನಿರ್ಮಲಸೀತಾರಾಮನ್ ಹಾಗು ವೇದಿಕೆ ಮೇಲಿದ್ದ ಇತರ ಗಣ್ಯರು ಪೊಲೀಸರಿಗೆ ಸೂಚಿಸಿದರು.  ಈ ಘಟನೆಯಿಂದ ಸಚಿವ ಡಾ ಹೆಚ್ ಸಿ ಮಹದೇವಪ್ಪ ತೀವ್ರ ಮುಜುಗರಕ್ಕೀಡಾದರು.

ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಗೆ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಕೆ

ಈ ಮಧ್ಯೆ  ವಿವಿಧ ಬೇಡಿಕೆ ಈಡೇರಿಸುವಂತೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಕೆ ಮಾಡಲಾಯಿತು. ರೈತರ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಾಯಿತು. ಈ ವೇಳೆ ನಿರ್ಮಲ ಸೀತಾರಾಮನ್ ಸಮಾಧಾನದಿಂದಲೇ ರೈತರ ಸಮಸ್ಯೆ ಆಲಿಸಿದರು.