ಮೈಸೂರು : ನಜರಾಬಾದ್‌ನ ಹೈದರಾಲಿ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಸಮತಟ್ಟುಗೊಳಿಸುವಿಕೆ ಮತ್ತು ವಿಸ್ತರಣಾ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಏಪ್ರಿಲ್‌ನಲ್ಲಿ ನವೀಕೃತ ರಸ್ತೆ ಉದ್ಘಾಟನೆಗೊಳ್ಳಲಿದೆ. 10 ಮೀಟರ್ ಅಗಲವಿದ್ದ ರಸ್ತೆಯನ್ನು ಈಗ 30 ಮೀಟರ್‌ಗೆ ವಿಸ್ತರಿಸಲಾಗಿದೆ.
ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಈ ಕಾಮಗಾರಿಯನ್ನು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಡಿ ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ)ದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿದ್ದ 40ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಿದ ಘಟನೆ ವಿವಾದದ ಸ್ವರೂಪ ಪಡೆದುಕೊಂಡು ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಏನಿದು ಕಾಮಗಾರಿ..? – ಎಸ್‌ಪಿ ಕಚೇರಿ ವೃತ್ತದಿಂದ ನೆಕ್ಸಸ್ ಮಾಲ್ ಸಮೀಪದ ಕಾಳಿಕಾಂಬ ದೇವಾಲಯದವರೆಗಿನ ಈ ರಸ್ತೆಯನ್ನು ಸಮಗ್ರ ಅಭಿವೃದ್ಧಿ ಯೋಜನೆಯಡಿ ವಿಸ್ತರಿಸಲಾಗಿದೆ. ಮೈಸೂರು ನಗರದ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಅನುಸಾರವಾಗಿ ಕೈಗೊಂಡ ಈ ಯೋಜನೆಯಲ್ಲಿ ಮೀಡಿಯನ್, ಎರಡು ಬದಿಗಳಲ್ಲೂ ಫುಟ್‌ಪಾತ್, ಸ್ಟಾಮ್‌ರ್‍ವಾಟರ್ ಬಾಕ್ಸ್ ಡ್ರೈನ್ ಮತ್ತು ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ.
ರಸ್ತೆಯ ಮಧ್ಯದಲ್ಲಿ 2.5 ಮೀಟರ್ ಅಗಲದ ಕೇಂದ್ರ ಮೀಡಿಯನ್ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಇಲ್ಲಿ ಹೂವಿನ ಸಸಿಗಳನ್ನು ನೆಡಲಾಗುವುದು. ಎರಡು ಬದಿಗಳಲ್ಲೂ ಬಾಕ್ಸ್ ಡ್ರೈನ್‌ಗಳನ್ನು ಹಾಕಲಾಗಿದ್ದು, ನೀರು ನಿಂತುಹೋಗುವ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಪಾದಚಾರಿಗಳ ಸೌಕರ್ಯಕ್ಕಾಗಿ ಸಿಮೆಂಟ್ ಟೈಲ್ಸ್‌ನಿಂದ ಫುಟ್‌ಪಾತ್ ಅಭಿವೃದ್ಧಿಪಡಿಸಲಾಗುತ್ತಿದೆ. ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು, ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಂಕ್ಷನ್‌ನಲ್ಲಿ ದೃಷ್ಟಿ ಸಮಸ್ಯೆಗೆ ಪರಿಹಾರ – ಹೈದರ್ ಅಲಿ ರಸ್ತೆ, ಎಸ್‌ಪಿ ಆಫೀಸ್ ರಸ್ತೆ ಮತ್ತು ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ರಸ್ತೆಗಳು ಸಂಧಿಸುವ ಜಂಕ್ಷನ್‌ನಲ್ಲಿ ಈ ಹಿಂದೆ ಇದ್ದ ತೀವ್ರ ಎತ್ತರದ ವ್ಯತ್ಯಾಸದಿಂದ ಆಜೀಜ್ ಸೇಠ್ ರಸ್ತೆಯಿಂದ ಬರುವ ವಾಹನಗಳಿಗೆ ಅಡಚಣೆಯಾಗುತ್ತಿತ್ತು. ಮಾಲ್ ಕಡೆಯಿಂದ ಬರುವ ಚಾಲಕರಿಗೆ ಎದುರು ಬರುವ ವಾಹನಗಳು ಸರಿಯಾಗಿ ಕಾಣುತ್ತಿರಲಿಲ್ಲ. ಇದರಿಂದ ಅಪಘಾತ ಮತ್ತು ಸಂಚಾರ ದಟ್ಟಣೆ ಸಮಸ್ಯೆ ಸಂಭವಿಸುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಜಂಕ್ಷನ್‌ನಲ್ಲಿದ್ದ ಎತ್ತರದ ಪ್ರದೇಶವನ್ನು ಸಮತಟ್ಟುಗೊಳಿಸಲಾಗಿದೆ.
ಮೂರು ದಿಕ್ಕುಗಳಿಂದ ಬರುವ ಸಂಚಾರವನ್ನು ಗಮನಿಸಿ ಎಂಜಿನಿಯರ್‌ಗಳು ವೈಜ್ಞಾನಿಕವಾಗಿ ಜಂಕ್ಷನ್ ಅನ್ನು ಮರುವಿನ್ಯಾಸಗೊಳಿಸಿದ್ದಾರೆ. ಸಂಚಾರ ಪೊಲೀಸರು ಜಂಕ್ಷನ್‌ನಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಿದ್ದಾರೆ. ಫುಟ್‌ಪಾತ್, ಬೀದಿ ದೀಪಗಳ ಸ್ಥಾಪನೆ ಮತ್ತು ಕೇಂದ್ರ ಮೀಡಿಯನ್‌ನಲ್ಲಿ ಸಸಿ ನೆಡುವ ಕಾಮಗಾರಿ ಏಪ್ರಿಲ್ ಎರಡನೇ ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಏಪ್ರಿಲ್ ಅಂತ್ಯಕ್ಕೆ ರಸ್ತೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.















