ಪಶ್ಚಿಮ ಬಂಗಾಳ: ಹೋಟೆಲ್ ಕೊಠಡಿಯಲ್ಲೇ ವೈದ್ಯರೊಬ್ಬರು ನಿಗೂಢವಾಗಿ ಸಾವನ್ನಪಿದ್ದ ಘಟನೆ ಗುರುವಾರ(ನ.7) ಪಶ್ಚಿಮ ಬಂಗಾಳದ ಜಾರ್ ಗ್ರಾಮ್ ನಲ್ಲಿ ನಡೆದಿದೆ.
ಡಾ.ದಿಪ್ರಾ ಭಟ್ಟಾಚಾರ್ಯ ಸಾವನ್ನಪಿರುವ ಹಿರಿಯ ವೈದ್ಯ.
ಜಾರ್ಗ್ರಾಮ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿದ್ದು ಅಲ್ಲೇ ಪಕ್ಕದ ಹೋಟೆಲ್ನ ಐದನೇ ಮಹಡಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಗುರುವಾರ ಹೋಟೆಲ್ ಸಿಬಂದಿ ಎಷ್ಟೇ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ ಇದರಿಂದ ಅನುಮಾನಗೊಂಡ ಸಿಬಂದಿ ಕೊಠಡಿ ಬಳಿ ತೆರಳಿ ಬಾಗಿಲು ಬಡಿದಿದ್ದಾರೆ ಆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಬಳಿಕ ಹತ್ತಿರದ ಪೊಲೀಸ್ ಠಾಣೆಗೆ ವಿಚಾರ ತಿಳಿಸಲಾಯಿತು. ಬಳಿಕ ಬಂದ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದ ವೇಳೆ ವೈದ್ಯರು ಹಾಸಿಗೆ ಮೇಲೆ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ, ಬಳಿಕ ಅವರನ್ನು ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಅಲ್ಲದೆ ಹಾಸಿಗೆ ಬಳಿ ಸಿರಿಂಜ್ ಮತ್ತು ಡೆತ್ ನೋಟ್ ಪತ್ತೆಯಾಗಿದೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಘಟನೆ ಸಂಬಂಧ ಆಸ್ಪತ್ರೆಯ ಅಧೀಕ್ಷಕ ಡಾ.ಅನುರುಪ್ ಮಾತನಾಡಿ, ಭಟ್ಟಾಚಾರ್ಯ ಅವರು ಕಳೆದ ಕೆಲ ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅವರ ಸ್ನೇಹಿತರಿಂದ ಕೇಳಿಪಟ್ಟಿದ್ದೇನೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.