ಹಾಸನ: ಹಾಸನದ ಹನುಮಂತಪುರ ಗ್ರಾಮದಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ಇಬ್ಬರು ಯುವಕರು ನಿಗೂಢವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು 24 ವರ್ಷದ ನವಾಬ್ ಮತ್ತು 30 ವರ್ಷದ ರಾಮ ಸಂಜೀವನ್ ಎಂದು ಗುರುತಿಸಲಾಗಿದ್ದು ಇಬ್ಬರ ಮೃತದೇಹ ಕೊಠಡಿಯಲ್ಲಿ ಪತ್ತೆಯಾಗಿವೆ.
ಉತ್ತರ ಪ್ರದೇಶದ ನಯನ್ಪುರ ಗ್ರಾಮದವರಾದ ಯುವಕರು ಉದ್ಯೋಗ ಅರಸಿ ಹಾಸನ ತಾಲೂಕಿನ ಹನುಮಂತಪುರ ಗ್ರಾಮಕ್ಕೆ ಬಂದಿದ್ದು, ಹನುಮಂತಪುರ ಗ್ರಾಮದ ಮಹೇಶ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜ್ವರ ಬಂದಿದ್ದರಿಂದ ಔಷಧಿ ಸೇವಿಸಿ ಮಲಗಿದ್ದ ಅವರು ಮತ್ತೆ ಎದ್ದೇಳಲಿಲ್ಲ.
ಒಂದು ದಿನ ಕಳೆದರು ಮನೆಯ ಬಾಗಿಲು ತೆರೆಯದಿದ್ದರಿಂದ ಮನೆಯ ಮಾಲೀಕ ಮಹೇಶ್ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಯುವಕರು ಮಲಗಿದ್ದ ಜಾಗದಲ್ಲಿಯೇ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.