ಮೈಸೂರು(Mysuru): ಮೈಸೂರು ದಸರಾ ಹಿನ್ನೆಲೆಯಲ್ಲಿ ಪರಿಚಯಿಸಿದ್ದ 4,999 ರೂ. ಬೆಲೆಯ ‘ಗೋಲ್ಡ್ ಕಾರ್ಡ್’ಗಳು ಸೋಲ್ಡ್ ಔಟ್ ಆಗಿವೆ.
ಸಾವಿರ ಗೋಲ್ಡ್ ಕಾರ್ಡ್ಗಳನ್ನು ಮಾರುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿತ್ತು. 500 ಕಾರ್ಡ್ಗಳನ್ನು ಆನ್ಲೈನ್ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಉಳಿದವು ಆಫ್ಲೈನ್ನಲ್ಲಿ ಮಾರಾಟವಾಗಿವೆ.
ವಿಜಯ ದಶಮಿಯಂದು ನಡೆಯುವ ಜಂಬೂಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ಅವಕಾಶವನ್ನು ಈ ಕಾರ್ಡ್ ಕಲ್ಪಿಸುತ್ತದೆ. ಪ್ರತ್ಯೇಕವಾಗಿ ಆಸನದ ವ್ಯವಸ್ಥೆಯನ್ನು ಆ ಕಾರ್ಡ್ದಾರರಿಗೆ ಮಾಡಲಾಗುತ್ತದೆ. ಅಲ್ಲದೇ, ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡೇಶ್ವರಿ ದೇವಸ್ಥಾನ, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ಸಂತ ಫಿಲೋಮಿನಾ ಚರ್ಚ್, ರೈಲ್ವೆ ಸಂಗ್ರಹಾಲಯ, ಮಂಡ್ಯ ಜಿಲ್ಲೆಯ ಕೆಆರ್ಎಸ್ ಉದ್ಯಾನಕ್ಕೆ ಒಮ್ಮೆ ಮಾತ್ರ ಉಚಿತವಾಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಕಾಳ ಸಂತೆಯಲ್ಲಿ ಖರೀದಿಸಬೇಡಿ
ಕೆಲವು ಟ್ರಾವೆಲ್ಸ್ ಏಜೆನ್ಸಿಯವರು ದಸರಾ ಗೋಲ್ಡ್ ಕಾರ್ಡ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದೆ. ಅನಧಿಕೃತ ವ್ಯಕ್ತಿ–ಸಂಸ್ಥೆಗಳಿಂದ ಕಾಳಸಂತೆಯಲ್ಲಿ ದಸರಾ ಟಿಕೆಟ್ ಅಥವಾ ಗೋಲ್ಡ್ ಕಾರ್ಡ್ಗಳನ್ನು ಖರೀದಿಸಬೇಡಿ.
– ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ, ಮೈಸೂರು.
ಹೀಗಾಗಿ, ಜನರಿಂದ ಕಾರ್ಡ್ಗೆ ಬೇಡಿಕೆ ಕಂಡುಬಂದಿದ್ದು, ಕೆಲವೇ ದಿನಗಳಲ್ಲಿ ಬಿಕರಿಯಾಗಿವೆ. ಇದರಿಂದ ಜಿಲ್ಲಾಡಳಿತಕ್ಕೆ ₹ 49 ಲಕ್ಷ ವರಮಾನ ಬಂದಿದೆ.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯಕ್ರಮದ ಟಿಕೆಟ್ಗಳನ್ನು ಸೆ.30ರಂದು ಸಂಜೆ 5ರ ನಂತರ https://mysoredasara.gov.in/ ಜಾಲತಾಣದಲ್ಲಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
‘₹ 1,500 ಹಾಗೂ ₹ 1000 ಬೆಲೆಯ ಟಿಕೆಟ್ಗಳನ್ನು ಮಾರಲಾಗುತ್ತದೆ. ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ವೀಕ್ಷಣೆಗೆ 1500 ಮತ್ತು ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ 2ಸಾವಿರ ಟಿಕೆಟ್ಗಳನ್ನು ಮಾರಲಾಗುವುದು’ ಎಂದು ತಿಳಿಸಿದರು.