ಮನೆ ರಾಜಕೀಯ ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಯತ್ನ: ನಳಿನ್‌ ಕುಮಾರ್‌ ಕಟೀಲ್‌

ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಯತ್ನ: ನಳಿನ್‌ ಕುಮಾರ್‌ ಕಟೀಲ್‌

0

ಬೆಂಗಳೂರು ( Bengaluru)- ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಗಲಭೆ ಮೂಲಕ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಮತೀಯವಾದದ ಹೆಸರಿನಲ್ಲಿ ಬೆಂಕಿ ಹಾಕುವ ಕೆಲಸವನ್ನು ಮಾಡುತ್ತಿದೆ. ಅಧಿಕಾರ ಪಡೆಯಲು ಅರಾಜಕತೆ ಸೃಷ್ಟಿಸುವ ಪ್ರವೃತ್ತಿ ಕಾಂಗ್ರೆಸ್ ಪಕ್ಷದ್ದು, ಡಿಜೆ.ಹಳ್ಳಿ, ಕೆಜಿ.ಹಳ್ಳಿ ಪ್ರಕರಣ, ಹರ್ಷ ಕೊಲೆ ಪ್ರಕರಣ, ಹುಬ್ಬಳ್ಳಿ ಹಿಂಸಾಚಾರದ ಘಟನೆ ಇದಕ್ಕೆ ಉದಾಹರಣೆ ಎಂದು ಕಿಡಿಕಾರಿದರು.

ಭಿಂದ್ರನ್‍ವಾಲೆ, ದಾವೂದ್ ಇಬ್ರಾಹಿಂಗೆ ಬೆಂಬಲ ಕೊಡುವ ಮೂಲಕ ಕಾಂಗ್ರೆಸ್ ಪಕ್ಷವು ಭಯೋತ್ಪಾದನೆಗೆ ಪ್ರೇರಣೆ ಮತ್ತು ಭ್ರಷ್ಟಾಚಾರಕ್ಕೂ ಪ್ರೇರಣೆ ನೀಡಿದೆ ಎಂದು ಟೀಕಿಸಿದ ಅವರು, ಜೀಪ್ ಹಗರಣ, ನೆಹರೂವಿನಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಎಲ್ಲರ ಅಧಿಕಾರದ ಸಂದರ್ಭದಲ್ಲೂ ಒಟ್ಟು 4 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತದ ಭ್ರಷ್ಟಾಚಾರ ಹಗರಣಗಳು ನಡೆದಿದೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗಂಗೋತ್ರಿ ಎಂಬಂತಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ
ಕಾಲ ಹೊರತುಪಡಿಸಿ ಇತರ ಎಲ್ಲ ಕಾಂಗ್ರೆಸ್ ಪ್ರಧಾನಿಗಳ ಅವಧಿಯಲ್ಲಿ ಒಂದಿಲ್ಲೊಂದು ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ ಎಂದರು. 

ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ 150 ಪ್ಲಸ್ ಶಾಸಕ ಸ್ಥಾನ ಪಡೆಯಲು ಕಾರ್ಯತಂತ್ರ ರೂಪಿಸಲಾಗಿದೆ. ಮೂರು ತಂಡಗಳಲ್ಲಿ ಪಕ್ಷದ ಸಂಘಟನೆಗಾಗಿ ಪ್ರವಾಸವೂ ನಡೆಯುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಹತ್ತಾರು ಸಾಧನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಲಾಗಿದೆ. ಕಾಂಗ್ರೆಸ್ ವಿರುದ್ಧ ಇನ್ನೊಂದು ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿಸಿದರು. ಹಾಸನ, ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಕುರಿತು
ಚರ್ಚಿಸಲಾಗಿದೆ ಎಂದರು.

ಪ್ರತಿ ಪೇಜ್‍ಗೆ ಆರು ಜನರ ಸಮಿತಿ ರಚಿಸಲಾಗಿದೆ. ಒಂದು ಮಂಡಲದಿಂದ ಇನ್ನೊಂದು ಮಂಡಲಕ್ಕೆ ತೆರಳಿ ಪೇಜ್ ಕಮಿಟಿ ಕಾರ್ಯದ ಪರಿಶೀಲನೆ ನಡೆದಿದೆ. ಬೂತ್ ಅಧ್ಯಕ್ಷರ ನಾಮಫಲಕ ಜೋಡಣೆ ದೇಶದಲ್ಲೇ ಮೊದಲ ಬಾರಿಗೆ ನಡೆದಿದ್ದು, ಶೇ 90ರಷ್ಟು ಕಾರ್ಯ ಮುಕ್ತಾಯವಾಗಿದೆ ಎಂದರು. ಪಕ್ಷದ ಸ್ಥಿತಿಗತಿಯ ಅವಲೋಕನವೂ ನಡೆಯುತ್ತಿದೆ ಎಂದು ಹೇಳಿದರು.

ಹಿಂದಿನ ಲೇಖನಜಹಂಗೀರ್ ಪುರಿ ಗಲಭೆ ಪ್ರಕರಣ: ಶಂಕಿತರ ವಿರುದ್ಧ ಪಿಎಂಎಲ್‌ ಎ ಅಡಿ ಕೇಸ್ ದಾಖಲು
ಮುಂದಿನ ಲೇಖನರಾಜ್ಯದಲ್ಲಿ ಮತ್ತೆ ಕೊರೊನಾ ಹೆಚ್ಚಳ: 139 ಮಂದಿಗೆ ಪಾಸಿಟಿವ್‌