ಮನೆ ಸ್ಥಳೀಯ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರೆ ಇಡೀ ಭಾರತ  ದೇಶವನ್ನು ಮೈಸೂರಿನ ಕಡೆಗೆ ಆಕರ್ಷಿಸುವ ವ್ಯಕ್ತಿತ್ವ : ಎಚ್ . ಸಿ ಮಹಾದೇವಪ್ಪ

ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರೆ ಇಡೀ ಭಾರತ  ದೇಶವನ್ನು ಮೈಸೂರಿನ ಕಡೆಗೆ ಆಕರ್ಷಿಸುವ ವ್ಯಕ್ತಿತ್ವ : ಎಚ್ . ಸಿ ಮಹಾದೇವಪ್ಪ

0

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರೆ ಇಡೀ ಭಾರತ ದೇಶವನ್ನು ಮೈಸೂರಿನ ಕಡೆಗೆ ಆಕರ್ಷಿಸುವಂತಹ ವ್ಯಕ್ತಿತ್ವ. ಈ ವ್ಯಕ್ತಿತ್ವ ಬರುವುದಕ್ಕೆ ಮೂಲ ಕಾರಣ ಅವರ ನಡೆ ಮತ್ತು ನುಡಿ ಮತ್ತು ನಿರ್ಧಾರಗಳು ಹಾಗೂ ಅವರ ಆದರ್ಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಒಡೆಯರ್ ಆಡಳಿತ ದಾರಿ ಎಲ್ಲಾ ಕಾಲದಲ್ಲೂ ಜನರ ಪರವಾಗಿ, ಅಭಿವೃದ್ಧಿಯ ಪರವಾಗಿ, ಮಾನವನ ಸಂಪನ್ಮೂಲ ಮನರಂಜನೆ ಮತ್ತು ಅದರ ಸದುಪಯೋಗಕ್ಕಾಗಿ. ತಮ್ಮ ಆಡಳಿತದಲ್ಲಿ ದೊಡ್ಡ ಶಕ್ತಿಯಾಗಿ ದೇಶದ ಮುಂದೆ ಕಾಣಿಸುತ್ತಿದ್ದರು ಎಂದು ಹೇಳಿದರು.
ಮೈಸೂರು ಎಂದರೆ ಸ್ವತಂತ್ರ ಬರುವುದಕ್ಕಿಂತ ಮುಂಚೆ ಕತ್ತಲಲ್ಲಿ ಇದ್ದರೂ, ನಾಗರಿಕತೆಯ ಗುಣಲಕ್ಷಣಗಳು ಅಷ್ಟಾಗಿ ಗೊತ್ತಿರಲಿಲ್ಲ. ಶಿಕ್ಷಣ ಇರಲಿಲ್ಲ, ಅಸಮಾನತೆ, ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯಗಳು, ದೇವದಾಸಿ ಪದ್ಧತಿ ಜೀವಂತವಾಗಿದ್ದ ಕಾಲವಾಗಿತ್ತು. ಆದರೂ ನಾವು ಏಷ್ಯಾದಲ್ಲಿ ಮೊದಲನೆಯ ರಾಜ್ಯ ಹೈಡ್ರೋ ಎಲೆಕ್ಟ್ರಾನಿಕ್‌ನಿಂದ ವಿದ್ಯುತ್ ಉತ್ಪಾದನೆ ಮಾಡಿದ ರಾಜ್ಯ. ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗುವಂತದ್ದು, ಇಡೀ ಏಷ್ಯಾ ಖಂಡದಲ್ಲಿ ಮೈಸೂರಲ್ಲಿ ಮೊದಲಿಗೆ ಬೀದಿ ದೀಪ ಅಳವಡಿಸಲಾಯಿತು ಎಂದು ತಿಳಿಸಿದರು.


ಜನರ ಜೀವನದ ಬಗ್ಗೆ ಪರಿಕಲ್ಪನೆ ಸಾಕಷ್ಟು ತುಂಬಿಕೊಂಡಿದ್ದ ಅವರು ವಿದ್ಯುತ್‌ಚ್ಛಕ್ತಿ ಎಂದರೆ ಗೃಹಬಳಕೆ, ಕೃಷಿ ಮತ್ತು ಕೈಗಾರಿಕೆ ಅವಶ್ಯಕತೆ ಬೇಕಾದಂತಹ ಅತ್ಯಂತ ಅಮೂಲ್ಯವಾದಂತಹ ವಸ್ತು. ವಿದ್ಯುತ್ ಚ್ಛಕ್ತಿ ಇದು ಏಷ್ಯಾ ಖಂಡದಲ್ಲಿ ಕತ್ತಲೆಯಲ್ಲಿ ಇದ್ದಾಗ ಅವರು ವಿದ್ಯುತ್ ಚ್ಛಕ್ತಿ ತಂದು ಕೊಟ್ಟವರು. ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ಉತ್ತಮ ದೃಷ್ಟಿಕೋನ ಅವರ ಆಡಳಿತ ಇತ್ತು ಎಂದು ತಿಳಿಸಿದರು. ಆಡಳಿತ ಮಾಡುವವರು ಪ್ರಜಾಪ್ರಭುತ್ವವಾದಿಗಳಾಗಿ ಇರಬೇಕು. ಪ್ರಜಾಪ್ರಭುತ್ವವಾದಿ ಜನರಿಗೋಸ್ಕರ, ಜನರ ಬದುಕಿಗೋಸ್ಕರ, ಅವರ ಏಳಿಗೆಗಾಗಿ ಸಮುದಾಯದ ಸೌಹಾರ್ದತೆಗಾಗಿ ಮತ್ತು ಅವರ ಸ್ವಾಭಿಮಾನ ಮತ್ತು ಸ್ವರಾಜ್ಯದ ಬದುಕಿಗಾಗಿ ತಮ್ಮ ಆಡಳಿತ ಕಾಲ ನಡೆಸಿದ್ದಾರೆ. ಇಡೀ ಆಡಳಿತ ಜೀವನದುದ್ದಕ್ಕೂ ಅವರು ಮಾಡಿದಂತಹ ಕೆಲಸಗಳು ಇಂದು ನಮ್ಮ ಕಣ್ಣ ಮುಂದೆ ಗೋಚರಿಸುತ್ತಿವೆ ಎಂದು ಹೇಳಿದರು.

ಅವರು ಕೇವಲ ಒಬ್ಬ ರಾಜನಾಗಿರಲಿಲ್ಲ ಶಿಕ್ಷಣದಲ್ಲಿ ಉನ್ನತ ಅಧ್ಯಯನ ಮಾಡಿದವರು. ಶಿಕ್ಷಣಕ್ಕೆ ಮಹತ್ವ ಕೊಟ್ಟವರು. ಬುದ್ಧ ಹೇಳಿರುವಂತೆ ನಿನಗೆ ನೀನೆ ಗುರು ನಿನಗೆ ನೀನೆ ಬೆಳಕು ಎಂಬುವಂತೆ ನಮಗೆ ಶಿಕ್ಷಣ ಬೇಕೇ ಬೇಕು ಎಂದು ಶಿಕ್ಷಣಕ್ಕೆ ಮಹತ್ವ ನೀಡಿದವರು ಎಂದು ತಿಳಿಸಿದರು. ಮೈಸೂರಿನ ವಿಶ್ವವಿದ್ಯಾನಿಲಯ, ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ನಮ್ಮ ಕಣ್ಮುಂದೆ ಇದೆ. ದಲಿತರು, ಹಿಂದುಳಿದವರು, ಮಹಿಳೆಯರು ಎಲ್ಲರಿಗೂ ಶಿಕ್ಷಣ ಸಿಗಬೇಕು ಎನ್ನುವ ಸಲುವಾಗಿ ಶಿಕ್ಷಣದ ಮಹತ್ವದ ಬಗ್ಗೆ ಅವರು ನಿಲುವನ್ನು ಪಡೆದರು ಎಂದು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್.ತಂಗಡಗಿ ಮಾತನಾಡಿ, ಇಡೀ ದೇಶವೇ ಮೈಸೂರಿನ ಕಡೆ ತಿರುಗಿ ನೋಡುವ ಆಡಳಿತ ಮಾಡಿದಂತವರು ಯಾರಾದರೂ ಇದ್ದರೆ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೇಳಿದರು. ಇಂತಹ ಮಹಾನ್ ರಾಜರ ಜಯಂತಿಯನ್ನು ಯಾಕೆ ಮಾಡುತ್ತಿದ್ದೇವೆ ಎಂದರೆ ಇವರ ಜಯಂತ್ಯೋತ್ಸವದಿಂದ ಅವರು ಮಾಡಿದಂತಹ ಕೆಲಸಗಳನ್ನು ನಮ್ಮ ಯುವ ಪೀಳಿಗೆಗೆ ಹಾಗೂ ಯುವಕರಿಗೆ ತಿಳಿಸುವಂತಹ ಪ್ರಯತ್ನದಲ್ಲಿ ಇಂತಹ ಜಯಂತೋತ್ಸವವನ್ನು ಹೆಚ್ಚಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ಡಾ.ಅನಿತಾ.ಎಂ.ಎಸ್ ವಿಶೇಷ ಉಪನ್ಯಾಸ ನೀಡಿ, ಕನ್ನಡ ನಾಡಿನ ಪ್ರಾತಃ ಸ್ಮರಣೀಯ ವ್ಯಕ್ತಿಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಒಬ್ಬರು. ಆಧುನಿಕ ಕನ್ನಡ ನಾಡಿನ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್. ಇಂದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ಬೆಂಗಳೂರು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ದೇಶ ಯುವಜನರು ಉದ್ಯೋಗಾವಕಾಶಗಳನ್ನು ಅರಸುವಾಗ ಅವರ ಮನಸ್ಸಿನಲ್ಲಿ ಮೂಡುವುದು ಮೊದಲಿಗೆ ಬೆಂಗಳೂರಿನ ಹೆಸರು ಎಂದು ತಿಳಿಸಿದರು.

ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು, ಸ್ಟಾರ್ಟ್ ಅಪ್, ಶೈಕ್ಷಣಿಕ ವಲಯ ಹೀಗೆ ಬೆಂಗಳೂರು ಹತ್ತು ಹಲವು ಕ್ಷೇತ್ರಗಳಲ್ಲಿ ಇಂದು ವಿಶ್ವವ್ಯಾಪ್ತಿಯಾಗಿದೆ. ಆದರೆ, ಈ ಸಾಧನೆ ಕೇವಲ ಒಂದೆರಡು ದಶಕಗಳಲ್ಲಿ ಸಾಧನೆಯಾದದ್ದಲ್ಲ. ಅದರ ಹಿಂದೆ ನೂರಾರು ವರ್ಷಗಳ ಪರಿಶ್ರಮವಿದೆ. ಈ ಎಲ್ಲವೂ ಮೈಸೂರಿನ ಪ್ರಸಿದ್ಧ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಕಿದ ಅಡಿಪಾಯದ ಮೇಲೆ ಎದ್ದು ನಿಂತಿರುವ ಭವ್ಯ ಸೌಧವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್ ಉಪಸ್ಥಿತರಿದ್ದರು.