ಮನೆ ಸುದ್ದಿ ಜಾಲ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜನ್ಮದಿನವನ್ನು ನಾಡಹಬ್ಬವಾಗಿ ಆಚರಿಸಿ: ಸರ್ಕಾರಕ್ಕೆ ಎಂಎಲ್‌ ಸಿ ಡಾ.ಡಿ.ತಿಮ್ಮಯ್ಯ ಒತ್ತಾಯ

ನಾಲ್ವಡಿ ಕೃಷ್ಣರಾಜ ಒಡೆಯರ್‌ ಜನ್ಮದಿನವನ್ನು ನಾಡಹಬ್ಬವಾಗಿ ಆಚರಿಸಿ: ಸರ್ಕಾರಕ್ಕೆ ಎಂಎಲ್‌ ಸಿ ಡಾ.ಡಿ.ತಿಮ್ಮಯ್ಯ ಒತ್ತಾಯ

0

ಮೈಸೂರು (Mysuru): ಲೇಖಕ ಜಗನ್ನಾಥ ಶೆಟ್ಟಿ ಅವರ ‘ಕರ್ನಾಟಕ ಧ್ರುವತಾರೆ’ ಕೃತಿಯನ್ನು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಬಿಡುಗಡೆ ಮಾಡಿದರು.

ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಅನ್ವೇಷಣಾ ಸೇವಾಟ್ರಸ್ಟ್ ಬುಧವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 40ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್, ಡಿ.ದೇವರಾಜ ಅರಸು ರಾಜ್ಯದ ಜನರಿಗೆ ದನಿಯಾದರು. ದಲಿತರು- ಹಿಂದುಳಿದವರ ಏಳಿಗೆಗೆ ಶ್ರಮಿಸಿದರು. ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ಇಬ್ಬರೂ ನಿರಂತರ ದುಡಿದರು. ಎಲ್ಲ ಕ್ಷೇತ್ರಗಳಲ್ಲೂ ರಾಜ್ಯದ ಸಾಧನೆಗೆ ಅಡಿಪಾಯ ಹಾಕಿಕೊಟ್ಟರು. ದೀನ- ದಲಿತರ ಆಶಾಕಿರಣವಾಗಿದ್ದ ನಾಲ್ವಡಿ ಅವರ ಜನ್ಮದಿನವನ್ನು ನಾಡಹಬ್ಬವಾಗಿ ಸರ್ಕಾರವು ಆಚರಿಸಬೇಕು ಎಂದು ಒತ್ತಾಯಿಸಿದರು.

ದೇವರಾಜ ಅರಸು ರಾಜ್ಯದಲ್ಲಿ ಜೀತ ಪದ್ಧತಿ ನಿರ್ಮೂಲನೆಗೊಳಿಸಿದ್ದಲ್ಲದೆ, ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೊಳಿಸಿ ನೊಂದವರಿಗೆ ಮಿಡಿದರು. ಈ ನೆಲದ ಕಾನೂನುಗಳು ರಾಷ್ಟ್ರದಲ್ಲೂ ಜಾರಿಗೊಳ್ಳಲು ಮೇಲ್ಪಂಕ್ತಿ ಹಾಕಿಕೊಟ್ಟರು ಎಂದರು.

ಮೈಸೂರು ನಗರದಲ್ಲಿ ಅರಸು ಪ್ರತಿಮೆ ಸ್ಥಾಪಿಸುವ ಸಂಬಂಧ ಹಲವು ವರ್ಷಗಳಿಂದ ಹೋರಾಟ ನಡೆದಿದೆ. ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು. ನಗರದ ಮುಖ್ಯಭಾಗದಲ್ಲಿ ಸ್ಥಾಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಲೇಖಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಟಿ.ಪ್ರಭಾಕರ ಶೆಟ್ಟಿ, ಜಯದೇವರಾಜೇ ಅರಸ್, ಉದ್ಯಮಿ ಕೊಳ್ಕೆಬೈಲ್ ಗಣೇಶ್ ನಾರಾಯಣ ಹೆಗ್ಡೆ, ವಿದುಷಿ ಡಾ.ವಿ.ಮಾಲಿನಿ, ಎಸ್.ಎನ್.ಸತ್ಯಪ್ರಕಾಶ್ ಅರಸ್ ಅವರಿಗೆ ‘ಧ್ವನಿಕೊಟ್ಟ ಧಣಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಕೃತಿಯ ಲೇಖಕ ಜಗನ್ನಾಥ ಶೆಟ್ಟಿ, ಅಖಿಲ ಕರ್ನಾಟಕ ಕರಾವಳಿ ಒಕ್ಕೂಟದ ಅಧ್ಯಕ್ಷ ಡಾ. ಎಸ್. ಶ್ರೀನಿವಾಸ ಶೆಟ್ಟಿ, ತವರು ಅರಸು ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್, ಅನ್ವೇಷಣಾ ಟ್ರಸ್ಟ್ ಅಧ್ಯಕ್ಷ ಅಮರ್ನಾಥರಾಜೇ ಅರಸ್, ಅರಸು ಸಂಘದ ಅಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸ್ ಇದ್ದರು.