ಸ್ಪಿರಿಟ್ ಗೇಮ್ ಬಗ್ಗೆ ಅನೇಕರು ಕೇಳಿರಬಹುದು. ಮೊಂಬತ್ತಿಯ ಮಂದ ಬೆಳಕಿನಲ್ಲಿ, ನಿರ್ಧಿಷ್ಟ ನಮೂನೆಯ ಔಝಾ ಬೋರ್ಡ್‌ನಲ್ಲಿ ಆತ್ಮಗಳನ್ನು ಆಹ್ವಾನಿಸಿ, ಅವುಗಳ ಜೊತೆ ಸಂವಹನ ನಡೆಸಿ ಭೂತ ಮತ್ತು ಭವಿಷ್ಯದ ಬಗ್ಗೆ ಸ್ಪಿರಿಟ್ ಗೇಮ್‌ನಲ್ಲಿ ತಿಳಿದು ಕೊಳ್ಳಬಹುದು ಎಂಬ ನಂಬಿಕೆಯಿದೆ. ಜಗತ್ತಿನಲ್ಲಿ ಭಯಾನಕ ಆಟಗಳಲ್ಲಿ ಒಂದು ಎಂದೇ (ಕು) ಖ್ಯಾತಿ ಪಡೆದುಕೊಂಡಿರುವ ಸ್ಪಿರಿಟ್ ಗೇಮ್ ಅನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ ಎಂಬ ನಿಯಮ ಕೂಡ ಇದೆ. ಇಂಥ ಸ್ಪಿರಿಟ್ ಗೇಮ್ ಬಗ್ಗೆ ತಿಳಿದು ಕೊಂಡ ಸ್ನೇಹಿತರಿಬ್ಬರು ಅದನ್ನು ಆಡಲು ಮುಂದಾಗುತ್ತಾರೆ. ಹೀಗೆ ಸ್ಪಿರಿಟ್ ಗೇಮ್ ಗೆ ಮುಖ ಮಾಡಿದ ಈ ಇಬ್ಬರು ಸ್ನೇಹಿತರಿಗೆ ಏನೇನು ಅನುಭವಗಳಾಗುತ್ತವೆ. ಸ್ಪಿರಿಟ್ ಗೇಮ್ ಅನ್ನು ಅಂದುಕೊಂಡಂತೆ ಪೂರ್ಣಗೊಳಿಸುತ್ತಾರಾ, ಇಲ್ಲವಾ? ಎಂಬುದೇ ಈ ವಾರ ತೆರೆಗೆ ಬಂದಿರುವ “ನಮಸ್ತೆ ಗೋಸ್ಟ್’ ಸಿನಿಮಾದ ಕಥಾಹಂದರ.
ಸಿನಿಮಾದ ಟೈಟಲ್ ಕೇಳಿದ ಮೇಲೆ, ಕಥಾಹಂದರದ ಬಗ್ಗೆ ಇಷ್ಟು ಹೇಳಿದ ಮೇಲೆ, ಇದೊಂದು ಹಾರರ್-ಥ್ರಿಲ್ಲರ್ ಶೈಲಿಯ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕನಸೊಂದರ ಹಿಂದಿನ ಕಾರಣದ ಹುಡುಕಾಟ, ಯುವಕರ ಹುಡು ಗಾಟ, ನಡುವೆಯೊಂದು ಲವ್‌ಸ್ಟೋರಿ, ಮೆಲೋಡಿ ಹಾಡುಗಳು ಎಲ್ಲವನ್ನೂ ಪೋಣಿಸಿ, ಒಂದಷ್ಟು ಕುತೂಹಲಭರಿತವಾಗಿ “ನಮಸ್ತೇ ಗೋಸ್ಟ್’ ಅನ್ನು ಪ್ರೇಕ್ಷಕರ ಮುಂದಿರಿಸುವ ಪ್ರಯತ್ನ ಮಾಡಿ ದ್ದಾರೆ ನಾಯಕ ನಟ ಕಂ ನಿರ್ದೇಶಕ ಭರತ್ ನಂದ.
ಬಹುತೇಕ ಹೊಸ ಪ್ರತಿಭೆಗಳೇ “ನಮಸ್ತೆ ಗೋಸ್ಟ್’ ಸಿನಿಮಾದ ತೆರೆಮುಂದೆ ಮತ್ತು ತೆರೆಹಿಂದೆ ಕೆಲಸ ಮಾಡಿರುವುದರಿಂದ, ಒಂದಷ್ಟು ತಾಜಾತನ ತೆರೆ ಮೇಲೆ ಕಾಣುತ್ತದೆ. ಅತಿಯಾದ ನಿರೀಕ್ಷೆಗಳಿಲ್ಲದೆ ತನ್ನತ್ತ ಮುಖ ಮಾಡಿದವರಿಗೆ “ನಮಸ್ತೆ ಗೋಸ್ಟ್’ ಒಂದಷ್ಟು ಮನರಂಜನೆ ಕೊಡಲು ಅಡ್ಡಿಯಿಲ್ಲ. ಮಾಮೂಲಿ ಆ್ಯಕ್ಷನ್, ಮಾಸ್ ಸಿನಿಮಾಗಳ ಅಬ್ಬರದಿಂದ ಸ್ವಲ್ಪ ಬದ ಲಾವಣೆಯಿರಲಿ ಎಂದು ಬಯಸುವವರು, ಥಿಯೇಟರ್ ನಲ್ಲಿ ಗೋಸ್ಟ್ ನತ್ತ ಮುಖ ಮಾಡಿ ಹಾರರ್ ಅನುಭವ ಪಡೆದುಕೊಂಡು ಬರಬಹುದು.