ಮನೆ ರಾಜ್ಯ ನಂದಿನಿ ಉತ್ಪನ್ನ ಯಾವುದೇ ಸ್ಪರ್ಧೆ ಎದುರಿಸಲು ಸಿದ್ಧವಿದೆ: ಸಚಿವ ಡಾ.ಕೆ.ಸುಧಾಕರ್‌

ನಂದಿನಿ ಉತ್ಪನ್ನ ಯಾವುದೇ ಸ್ಪರ್ಧೆ ಎದುರಿಸಲು ಸಿದ್ಧವಿದೆ: ಸಚಿವ ಡಾ.ಕೆ.ಸುಧಾಕರ್‌

0

ಬೆಂಗಳೂರು: ನಂದಿನಿ ಉತ್ಪನ್ನಗಳು ಬೇರೆ ರಾಜ್ಯ ಹಾಗೂ ದೇಶಗಳಲ್ಲೂ ಮಾರಾಟವಾಗುತ್ತಿದ್ದು, ಯಾವುದೇ ಸ್ಪರ್ಧೆ ಎದುರಿಸಲು ಸಿದ್ಧವಾಗಿವೆ. ಅಮೂಲ್‌ ಉತ್ಪನ್ನಗಳ ಮಾರಾಟದ ವಿಚಾರವನ್ನು ಕಾಂಗ್ರೆಸ್‌ನವರು ರಾಜಕೀಯಗೊಳಿಸಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಂದಿನಿ ಉತ್ಪನ್ನಗಳು ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಹಿಂದಿನ ಸಿಎಂ ಬಿ.ಎಸ್‌.ಯಡಿಯೂರಪ್ಪನವರು ಮೊದಲ ಬಾರಿಗೆ ರೈತರಿಗೆ 2 ರೂ. ಪ್ರೋತ್ಸಾಹ ಧನ ನೀಡಿದ್ದರು. ಈಗ 5 ರೂ. ನೀಡಲಾಗುತ್ತಿದೆ. ಅಂದರೆ ನಂದಿನಿಗೆ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ. ಯಾವುದೇ ಉತ್ಪನ್ನ ಯಾವುದೇ ಭಾಗಗಳಲ್ಲಿ ಮಾರಾಟವಾಗಬಹುದು. ಆದರೆ ಕಾಂಗ್ರೆಸ್‌ನವರು ಇದನ್ನು ರಾಜಕೀಯವಾಗಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ 16 ರಿಂದ 18 ಕಂಪನಿಗಳು ತಮ್ಮ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಆಗ ಇವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅಮೂಲ್‌ ಕಂಪನಿ ತನ್ನ ಉತ್ಪನ್ನ ಮಾರಾಟ ಮಾಡಲು ಮುಂದಾದಾಗ ಮಾತ್ರ ಸಮಸ್ಯೆ ಆರಂಭವಾಗಿದೆ ಎಂದರು.

ನಂದಿನಿ ಯಾವುದೇ ಸ್ಪರ್ಧೆಯನ್ನು ಎದುರಿಸಲು ಸಿದ್ಧ ಎಂಬುದು ನಮ್ಮ ವಿಶ್ವಾಸ. ವಿದೇಶಗಳಲ್ಲೂ ನಂದಿನಿ ಉತ್ಪನ್ನ ಮಾರಾಟವಾಗುತ್ತಿದೆ. ತಮಿಳುನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲೂ ನಂದಿನಿ ಹಾಲು ಮಾರಾಟವಾಗುತ್ತಿದೆ. ಕಾಂಗ್ರೆಸ್‌ನವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಹಾಗೆಯೇ ಮೊಸಳೆ ಕಣ್ಣೀರು ಹಾಕುತ್ತಿದ್ದರು. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

ಕಳೆದ ವಾರವಷ್ಟೇ ಕೋವಿಡ್‌ಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಲಾಗಿದೆ. ಪರೀಕ್ಷೆ ಹೆಚ್ಚಳ, ಜೀನೋಮಿಕ್‌ ಸೀಕ್ವೆನ್ಸ್‌, ಆಸ್ಪತ್ರೆ ದಾಖಲು ಮೊದಲಾದವುಗಳ ಬಗ್ಗೆ ಗಮನಹರಿಸಲಾಗಿದೆ. ರಾಜ್ಯದಲ್ಲಿ ಈಗ ಕೋವಿಡ್‌ ನಿಯಂತ್ರಣದಲ್ಲಿದೆ. ಆದರೆ ಜನರು ಮೂರನೇ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಜೊತೆಗೆ ಜನಸಂದಣಿಯ ಪ್ರದೇಶಗಳಿಗೆ ಹೋಗಬಾರದು, ಮಾಸ್ಕ್‌ ಧರಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರ ಕಾನೂನು ಪ್ರಕಾರ ಎಲ್ಲವನ್ನೂ ಮಾಡುತ್ತದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲಾಗಿದೆ. ಕೈಗಾರಿಕಾ ಕ್ಷೇತ್ರದಲ್ಲೂ ಉತ್ತಮ ಯೋಜನೆಗಳನ್ನು ನೀಡಿದೆ. ಆದರೆ ಕಾಂಗ್ರೆಸ್‌ ಪಕ್ಷ ಆಧಾರರಹಿತವಾಗಿ ಎಲ್ಲದಕ್ಕೂ ಆರೋಪ ಮಾಡುತ್ತಿದೆ ಎಂದರು.